ಬೆಂಗಳೂರು: ಎಸ್‌ಎಸ್‌ಎಲ್‌ಸಿ ನಂತರ ದೂರದ ಪ್ರದೇಶಗಳಲ್ಲಿ ಕಾಲೇಜುಗಳ ಕೊರತೆಯಿಂದ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸುತ್ತಿರುವ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ರಾಜ್ಯದ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಲು ಸರ್ಕಾರ ಅನುಮೋದನೆ ನೀಡಿದೆ.
ಇತ್ತೀಚೆಗೆ 100 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೇರಿಸಿದ್ದ ಸರ್ಕಾರ, ಇದೀಗ ಮುಂದಿನ ಹಂತವಾಗಿ ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳಾಗಿ ಪರಿವರ್ತಿಸುವ ಯೋಜನೆಗೆ ಹಸಿರು ನಿಶಾನೆ ತೋರಿದೆ. ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಆಯ್ದ 50 ಪ್ರೌಢಶಾಲೆಗಳಲ್ಲಿ ಪದವಿಪೂರ್ವ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆಗೆ ಅವಕಾಶ ನೀಡಲಾಗಿದೆ.
ಈ ಯೋಜನೆಯಡಿ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಪಿಯು ಕಾಲೇಜು ಇಲ್ಲದ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ, ಆಯ್ಕೆ ಮಾಡುವ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ತರಗತಿಯಲ್ಲಿ ಕನಿಷ್ಠ 40 ವಿದ್ಯಾರ್ಥಿಗಳು ಇರಬೇಕೆಂಬ ನಿಯಮ ರೂಪಿಸಲಾಗಿದೆ. ಆದರೆ 10ನೇ ತರಗತಿಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರೌಢಶಾಲೆ ನಂತರ ಸಮೀಪದಲ್ಲೇ ಕಾಲೇಜುಗಳಿಲ್ಲದ ಕಾರಣ ಹಲವಾರು ವಿದ್ಯಾರ್ಥಿನಿಯರು ಮುಂದಿನ ವಿದ್ಯಾಭ್ಯಾಸವನ್ನು ಕೈಬಿಡಬೇಕಾಗುತ್ತಿತ್ತು. ಈಗ ಈ ಯೋಜನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪದವಿಪೂರ್ವ ಶಿಕ್ಷಣಕ್ಕೆ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.
ಹೊಸದಾಗಿ ಆರಂಭವಾಗುವ ಪಿಯು ಕಾಲೇಜುಗಳಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ CSR ನಿಧಿ ಮೂಲಕ ಮೂರು ವರ್ಷಗಳ ಕಾಲ ಅನುದಾನ ನೀಡಲಾಗುತ್ತದೆ. ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮೂಲಸೌಕರ್ಯ ಮತ್ತು ವಿದ್ಯಾರ್ಥಿಗಳ ದಾಖಲಾತಿ ಕುರಿತು ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
