ಬೆಂಗಳೂರಿನಲ್ಲಿ ಮಾಲ್ಗಳಿಗೆ ಓಡಾಡುವ ಜನರ ಸಂಖ್ಯೆ ಹೆಚ್ಚಾಗಿಯೇ ಇದೆ. ಮಂತ್ರಿ ಮಾಲ್ , ಒರಿಯನ್ ಮಾಲ್ ಹೀಗೆ ಜನರು ಶಾಪಿಂಗ್, ಊಟ, ತಿಂಡಿ, ಸುತ್ತಾಡುವುದಕ್ಕೆ ಅಂತ ಮಾಲ್‌ಗೆ ಹೋಗ್ತಿರ್ತಾರೆ. ಆದ್ರೆ ಇದೀಗ ಈ ಮಾಲ್ಗಳಿಗೆ ಸಂಕಷ್ಟ ಎದುರಾಗಿದೆ. ಇರಾನ್-ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮದಿಂದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರವಾಗಿದ್ದರಿಂದ ಮಾಲ್‌ನ ಫುಡ್ ಕೋರ್ಟ್ ಮತ್ತು ಹೋಟೆಲ್‌ಗಳಿಗೂ ದೊಡ್ಡ ಬಿಸಿ ತಗುಲಿದೆ.
ಮಂತ್ರಿ ಮಾಲ್ ಬೆಂಗಳೂರಿನ ಅತಿ ಪ್ರಸಿದ್ಧ ಮಾಲ್‌ಗಳಲ್ಲಿ ಒಂದು. ಇಲ್ಲಿ ಶಾಪಿಂಗ್, ಸಿನಿಮಾ, ಫುಡ್ ಕೋರ್ಟ್ ಎಲ್ಲವೂ ಒಂದೇ ಕಡೆ ಇದ್ದು, ದಿನಕ್ಕೆ ಸಾವಿರಾರು ಜನರು ಬರುತ್ತಾರೆ. ಅದೇ ರೀತಿ ಒರಿಯನ್ ಮಾಲ್‌ಗೆ ಕೂಡ ನಿತ್ಯ ಸಾವಿರಾರು ಜನರು ಬರುತ್ತಿರುತ್ತಾರೆ. ಅವರಿಗೆ ಇದೀಗ ಯುದ್ಧದ ಎಫೆಕ್ಟ್ ತಟ್ಟಿದೆ.
ಇರಾನ್ ಇಸ್ರೇಲ್ ಯುದ್ಧದಿಂದ ಗ್ಯಾಸ್ ಸಮಸ್ಯೆ ಹೆಚ್ಚಾಗಿದ್ದು, ಈಗ ಮಾಲ್ ಒಳಗಿನ ಫುಡ್ ಕೋರ್ಟ್‌ನಲ್ಲಿ ಹಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಿವೆ. ಕೆಲವು ಮಾತ್ರ ಓಪನ್ ಇದ್ದು, ಅವುಗಳಲ್ಲಿ ಸೀಮಿತ ಮೆನು ಅಥವಾ ಚಹಾ-ಕಾಫಿ ಮಾತ್ರ ನೀಡುತ್ತಿವೆ. ಪ್ರಸಿದ್ಧ ರಾಜಧಾನಿ ಹೋಟೆಲ್ ಸಹ ಕ್ಲೋಸ್ ಆಗಿದೆ. ಇದು ಉತ್ತರ ಭಾರತೀಯ ಊಟಕ್ಕೆ ಹೆಸರುವಾಸಿಯಾಗಿದ್ದು, ಥಾಲಿ, ರೊಟ್ಟಿ, ದಾಲ್ ಮುಂತಾದವುಗಳಿಗೆ ಗ್ರಾಹಕರು ಹೆಚ್ಚು ಬರುತ್ತಿದ್ದರು. ಗ್ಯಾಸ್ ಇಲ್ಲದ ಕಾರಣ “ತಾತ್ಕಾಲಿಕ ಬಂದ್” ಎಂಬ ಬೋರ್ಡ್ ಹಾಕಲಾಗಿದೆ.
ಇನ್ನೂ ಒರಿಯನ್ನಲ್ಲಿ ಎಂಪೈರ್ ಕ್ಲೋಸ್, ಡೊಮಿನೋಸ್ ಕ್ಲೋಸ್, ಅನೇಕ ಫುಡ್ ಸ್ಟಾಲ್ ಕ್ಲೋಸ್ ಆಗಿದೆ. ಕಮರ್ಷಿಯಲ್ ಗ್ಯಾಸ್ ವ್ಯತ್ಯಯ ಹಿನ್ನಲೆ ಕ್ಲೋಸ್ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಮಾಲ್‌ಗೆ ಬೇರೆ ಬೇರೆ ಊರುಗಳಿಂದ ಬಂದವರು, ಸಿನಿಮಾ ನೋಡಲು ಬಂದವರು ಫುಡ್ ಕೋರ್ಟ್‌ಗೆ ಹೋದಾಗ ಹಲವು ಹೋಟೆಲ್‌ಗಳು ಬಂದ್ ಆಗಿರುವುದನ್ನು ನೋಡಿ ಆಶ್ಚರ್ಯಪಡುತ್ತಿದ್ದಾರೆ. ಕೆಲವರು ಊಟಕ್ಕಾಗಿ ಮಾಲ್‌ಗೆ ಬರುತ್ತಾರೆ, ಆದರೆ ಈಗ ಆಯ್ಕೆಗಳು ಕಡಿಮೆಯಾಗಿವೆ. ಫುಡ್ ಕೋರ್ಟ್‌ನಲ್ಲಿ ಕೆಲವು ಚಿಕ್ಕ ಔಟ್‌ಲೆಟ್‌ಗಳು ಮಾತ್ರ ಓಪನ್ ಇದ್ದು, ಅವುಗಳಲ್ಲಿ ಸ್ನ್ಯಾಕ್ಸ್ ಅಥವಾ ಕಡಿಮೆ ಗ್ಯಾಸ್ ಬೇಕಾದ ಐಟಂಗಳನ್ನು ಮಾತ್ರ ಮಾರಾಟ ಮಾಡುತ್ತಿವೆ.ಈ ಸಮಸ್ಯೆಗೆ ಮುಖ್ಯ ಕಾರಣ ಯುದ್ಧದಿಂದಾಗಿ ಜಾಗತಿಕ ತೈಲ ಮತ್ತು ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ. ಭಾರತದಲ್ಲಿ ಗೃಹ ಬಳಕೆಗೆ ಆದ್ಯತೆ ನೀಡುವುದರಿಂದ ವಾಣಿಜ್ಯ ಸಿಲಿಂಡರ್‌ಗಳು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಮಾರ್ಚ್ 9ರಿಂದ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್‌ಗಳು ಸ್ಟಾಕ್ ಮುಗಿದ ನಂತರ ಕಿಚನ್ ನಿಲ್ಲಿಸಬೇಕಾಗಿದೆ. ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಈ ವಿಷಯವನ್ನು ಗಂಭೀರವಾಗಿ ಗಮನಿಸಿ, ಸರ್ಕಾರಕ್ಕೆ ಮನವಿ ಮಾಡಿದೆ. ಹಲವು ಹೋಟೆಲ್‌ಗಳು ಎಲೆಕ್ಟ್ರಿಕ್ ಸ್ಟವ್ ಬಳಸಲು ಪ್ರಯತ್ನಿಸುತ್ತಿವೆ ಆದರೆ ಇದು ದೊಡ್ಡ ಸ್ಥಳಗಳಿಗೆ ಸಾಧ್ಯವಿಲ್ಲ.
ಮಂತ್ರಿ ಮಾಲ್, ಒರಿಯನ್ ಮಾಲ್ನಲ್ಲಿ ಈ ಸಮಸ್ಯೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಸಿನಿಮಾ ನೋಡಿ ಹೊರಬಂದವರು ಊಟಕ್ಕೆ ಬೇರೆಡೆ ಹೋಗಬೇಕಾಗುತ್ತಿದೆ. ಮಾಲ್ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಆದರೆ ತ್ವರಿತ ಪರಿಹಾರ ಸಿಗದಿದ್ದರೆ ಇನ್ನಷ್ಟು ಹೋಟೆಲ್‌ಗಳು ಮುಚ್ಚಬಹುದು.
ನಗರದ ಪ್ರತಿಷ್ಠಿತ ಮಾಲ್ಗಳಿಗೂ ತಟ್ಟಿದ ಗ್ಯಾಸ್ ಟ್ರಬಲ್; ಒಳಗಡೆ ಹೋಟೆಲ್‌ಗಳು ಬಂದ್ ಬಂದ್!
