Ad image

ರಾಜ್ಯಾದ್ಯಂತ ಬೇಸಿಗೆ ಮಳೆ ಅವಾಂತರ – ಸಿಡಿಲು ಬಡಿದು, ಗೋಡೆ ಕುಸಿದು ಇಬ್ಬರು ಸಾವು

Team SanjeMugilu
2 Min Read

ಬೆಂಗಳೂರು: ರಾಜ್ಯದ ಹಲವೆಡೆ ಮಂಗಳವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ ಸಾವನ್ನಪ್ಪಿದ್ದಾರೆ. ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಹಿಂದಿರುಗುವಾಗ ಸಿಡಿಲು ಬಡಿದು ಸಾವನಪ್ಪಿದ್ದಾರೆ.

ಇನ್ನು ಬೆಳಗಾವಿಯಲ್ಲಿಯೂ ಮನೆಯ ಗೋಡೆ ಕುಸಿದು ಪತ್ನಿ ಸಾವನ್ನಪ್ಪಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಂಟಮೂರಿ ಗ್ರಾಮದ ಪರ್ವಿನ್ ಬೇಪಾರಿ ಸಾವನ್ನಪ್ಪಿದ್ರೆ, ಶರೀಫ್ ಬೇಪಾರಿ ಬದುಕುಳಿದಿದ್ದಾರೆ. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಬಿರುಗಾಳಿಯಿಂದ 20ಕ್ಕೂ ಹೆಚ್ಚು ಗೂಡಂಗಡಿಗಳ ಮೇಲ್ಛಾವಣಿ ಹಾರಿ ಹೋಗಿವೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಸುರಿದ ಅಕಾಲಿಕ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆಗೆ ಪ್ರತಿಷ್ಠಿತ ಅರ್ಬನ್ ಓಯಸಿಸ್ ಮಾಲ್‌ನಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಕಲಘಟಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಪಾರ ಮಳೆಯಾಗಿದೆ. ಕಲಘಟಗಿ ಪಟ್ಟಣದ ಪ್ರಮುಖ ರಸ್ತೆಗಳು ಆಲಿಕಲ್ಲು ತುಂಬಿ ಹಿಮರಾಶಿಯಂತೆ ಗೋಚರಿಸುತ್ತಿತ್ತು.

ವಿಜಯಪುರ ಜಿಲ್ಲೆಯಾದ್ಯಂತ ಗುಡುಗು ಸಮೇತ ಭಾರಿ ಬಿರುಗಾಳಿ ಮಳೆ ಆಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲೂ ಆಲಿಕಲ್ಲು ಮಳೆ ಸುರಿದಿದೆ. ಬಾಗಲಕೋಟೆಯಲ್ಲಿಯೂ ವರ್ಷದ ಮೊದಲ ಮಳೆಯಾಗಿದೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ರಂಗೋಲಿ ಬಿಡಿಸಿ ಮಳೆಯನ್ನು ಸ್ವಾಗತಿಸಿದ್ದಾರೆ.

ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲೂ ಹಲವೆಡೆ ಆಲಿಕಲ್ಲು ಮಳೆ ಸುರಿದಿದೆ. ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಜೋರು ಮಳೆಯಾಗಿದೆ. ಸಿರವಾರ, ಮಾನ್ವಿ, ಲಿಂಗಸೂಗೂರು ತಾಲೂಕಿನ ಹಲವೆಡೆಯೂ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಚಾಮರಾಜನಗರ, ರಾಮನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನಲ್ಲಿ ಸುರಿದ ಮಳೆ ಶಿರಂಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದೆ. ಚಿಕ್ಕನಾಯಕನಹೊಸಳ್ಳಿ ಗ್ರಾಮದಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದಿದೆ. ಗಾಳಿಗೆ ಹಂಚುಗಳು ಹಾರಿಹೋಗಿವೆ. ಮತ್ತೊಂದೆಡೆ ಕೊಟ್ಟಿಗೆ ಶೀಟ್‌ಗಳು ಹಾರಿಹೋಗಿ ಮೂಟೆಗಳಲ್ಲಿ ಶೇಖರಿಸಿಟ್ಟಿದ್ದ ಭತ್ತ, ರಾಗಿ ಒದ್ದೆಯಾಗಿವೆ. ಒಟ್ಟಾರೆ ರಾಜ್ಯದ ಹಲವೆಡೆ ಸುರಿದ ವರುಣ ನಾನಾ ಅವಾಂತರಗಳನ್ನು ಸೃಷ್ಟಿಸಿದ್ದಲ್ಲದೇ ಬಿಸಿಲಿಗೆ ಬೆಂದಿದ್ದ ಭೂಮಿಗೂ ತಂಪೆರೆದಿದ್ದಾನೆ.

Share This Article