Ad image

ರಸ್ತೆ ಒತ್ತುವರಿ ಮಾಡಿದ ಎಚ್‌ಪಿ ಕಂಪನಿ; ಕಾಂಪೌಂಡ್ ಗೋಡೆ ತೆರವುಗೊಳಿಸಿದ ಕೆಆರ್ ಪುರ ಜೆಸಿ ಡಾ. ಸುಧಾ

Team SanjeMugilu
1 Min Read

ಬೆಂಗಳೂರು: ಸಾರ್ವಜನಿಕ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಎಚ್‌ಪಿ ಕಂಪನಿಯ ವಿರುದ್ಧ ಬೆಂಗಳೂರು ಪೂರ್ವ ವಲಯದ ಕೆಆರ್ ಪುರ ಜಂಟಿ ಆಯುಕ್ತೆ ಡಾ. ಸುಧಾ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿದ್ದಾರೆ.ನಗರದ ಕೆಆರ್ ಪುರ ವ್ಯಾಪ್ತಿಯ ಪ್ರಮುಖ ರಸ್ತೆಯಲ್ಲಿ ಎಚ್‌ಪಿ ಕಂಪನಿಗೆ ಸೇರಿದ ಆವರಣವು ರಸ್ತೆ ಭಾಗವನ್ನು ಅತಿಕ್ರಮಿಸಿಕೊಂಡಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ರಸ್ತೆ ಅಗಲವನ್ನು ಕುಗ್ಗಿಸುವ ರೀತಿಯಲ್ಲಿ ಕಂಪನಿಯ ಕಾಂಪೌಂಡ್ ಗೋಡೆ ನಿರ್ಮಾಣವಾಗಿರುವುದು ದೃಢಪಟ್ಟಿತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಆರ್ ಪುರ ಜಂಟಿ ಆಯುಕ್ತೆ ಡಾ.ಸುಧಾ ನೇತೃತ್ವದ ಅಧಿಕಾರಿಗಳ ತಂಡವು ತಕ್ಷಣ ಕಾರ್ಯಾಚರಣೆ ಕೈಗೊಂಡು, ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಿತು. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಡಾ. ಸುಧಾ ಅವರು ಮಾತನಾಡಿ, “ಸಾರ್ವಜನಿಕ ರಸ್ತೆಗಳ ಮೇಲೆ ಯಾವುದೇ ರೀತಿಯ ಒತ್ತುವರಿ ಸಹಿಸಲಾಗುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಅಕ್ರಮಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ,” ಎಂದು ಸ್ಪಷ್ಟಪಡಿಸಿದರು.
ನಗರದ ವಿವಿಧ ಭಾಗಗಳಲ್ಲಿ ರಸ್ತೆ ಒತ್ತುವರಿ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಿಬಿಎ ಅಧಿಕಾರಿಗಳು ಕ್ರಮಗಳನ್ನು ಕಠಿಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೆರವು ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ಸ್ಥಳೀಯರು ಈ ಕ್ರಮವನ್ನು ಸ್ವಾಗತಿಸಿ, ರಸ್ತೆ ಅಗಲೀಕರಣದಿಂದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ರಸ್ತೆ ಒತ್ತುವರಿ ಇದಕ್ಕೆ ಪ್ರಮುಖ ಕಾರಣವಾಗಿತ್ತು.

Share This Article