ಬೆAಗಳೂರು: ವಿಧಾನ ಪರಿಷತ್‌ನಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಮಹತ್ವದ ಮಾಹಿತಿ ಹೊರಬಂದಿದೆ. ಪೌರಾಡಳಿತ ಸಚಿವ ರಹೀಂ ಖಾನ್ ಮಂಗಳವಾರ ಪರಿಷತ್‌ನಲ್ಲಿ ಮಾತನಾಡುತ್ತಾ, ಬೆಂಗಳೂರು ಹೊರತುಪಡಿಸಿ ರಾಜ್ಯದ ೩೨೫ ನಗರ ಸ್ಥಳೀಯ ಸಂಸ್ಥೆಗಳು ಪ್ರತಿದಿನ ಒಟ್ಟು ೭,೩೦೪ ಮೆಟ್ರಿಕ್ ಟನ್ ಘನ ತ್ಯಾಜ್ಯವನ್ನು ಸಂಗ್ರಹಿಸುತ್ತಿವೆ ಎಂದು ತಿಳಿಸಿದ್ದಾರೆ. ಇದರಲ್ಲಿ ೬,೦೮೩ ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ ಎಂದು ವಿವರಿಸಿದರು.
ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧ
ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ೨೧೯ ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಂಸ್ಥೆಗಳಲ್ಲೂ ಈ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ೪೭ ನಗರ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಡಿಪಿಆರ್ ಸಿದ್ಧವಾಗಿದ್ದು, ಉಳಿದಡೆಗಳಿಗೂ ಶೀಘ್ರದಲ್ಲೇ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್–ಅರ್ಬನ್ ೨.೦ ಅಡಿಯಲ್ಲಿ ೫೧ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿದ್ದು, ೯೯೯ ಕಾಮಗಾರಿಗಳಲ್ಲಿ ೫೪೨ ಪೂರ್ಣಗೊಂಡಿವೆ. ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ ೨೫೯ ಕೋಟಿ ರೂ. ಹಾಗೂ ೨೨೬ ನಗರ ಸಂಸ್ಥೆಗಳಲ್ಲಿ ಸ್ಯಾನಿಟರಿ ಲ್ಯಾಂಡ್‌ಫಿಲ್ ನಿರ್ಮಾಣಕ್ಕೆ ೩೧ ಕೋಟಿ ರೂ. ಮೀಸಲಿಡಲಾಗಿದೆ. ಕಸ ಮಾಫಿಯಾ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
