Ad image

ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

Team SanjeMugilu
2 Min Read

ಬೆಂಗಳೂರು: ಚಿನ್ನದ ದರದಲ್ಲಿ  ಏರಿಳಿತ ಮುಂದುವರಿದಿರುವ ನಡುವೆಯೇ ಬೆಂಗಳೂರು  ನಗರದಲ್ಲಿ ಬಂಗಾರ ಖರೀದಿ ಮತ್ತು ಬುಕ್ಕಿಂಗ್ ಜೋರಾಗಿದೆ. ಕೆಲ ತಿಂಗಳುಗಳ ಹಿಂದೆ ಗಗನಕ್ಕೇರಿದ್ದ ಚಿನ್ನದ ಬೆಲೆ ಜನಸಾಮಾನ್ಯರ ಕೈಗೆಟುಕದಂತೆ ಮಾಡಿತ್ತು. ನಂತರ ಏಕಾಏಕಿ ದರ ಕುಸಿತವಾಗಿತ್ತು. ಇದೀಗ ಮತ್ತೆ ತುಸು ಏರಿಕೆಯಾಗಿದ್ದರೂ, ಇತ್ತೀಚಿನ ದರ ಇಳಿಕೆ ಆಭರಣ ಪ್ರಿಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಅಲ್ಲದೆ, ಮತ್ತೆ ಚಿನ್ನದ ದರ ಅಕ್ಷಯ ತೃತೀಯದ ವೇಳೆಗೆ ಅತಿಯಾದ ಏರಿಕೆ ಕಂಡರೆ ಸಮಸ್ಯೆ ಆಗದಿರಲಿ ಎಂದು ಈಗಿನ ದರಕ್ಕೆ ಚಿನ್ನ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಿನ ದರಕ್ಕೆ ಕಾಯ್ದಿರಿಸಿ ಅಕ್ಷಯ ತೃತೀಯದಂದು ಖರೀದಿ ಮಾಡುವುದು ಗ್ರಾಹಕರ ಪ್ಲಾನ್.

ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಹಾವು-ಏಣಿ ಆಟ ನಡೆಯುತ್ತಿದ್ದು, ಗ್ರಾಹಕರಲ್ಲಿ ಗೊಂದಲವೂ ಮೂಡಿಸಿದೆ. ದರ ಇಳಿದಿದೆ ಎನ್ನುವ ನಿರೀಕ್ಷೆಯ ನಡುವೆ ಮತ್ತೆ ಏರಿಕೆಯಾಗುತ್ತಿರುವುದು ಖರೀದಿದಾರರಿಗೆ ತಲೆನೋವಾಗಿದ್ದರೂ, ‘ಇದೀಗ ಕಡಿಮೆ ಇದೆ, ಮುಂದೆ ಮತ್ತಷ್ಟು ಏರಬಹುದು’ ಎಂಬ ಭಾವನೆಯಿಂದ ಅನೇಕರು ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ.

ಮಾರ್ಚ್ 25ರಂದು ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ಸುಮಾರು 345 ರೂ. ಏರಿಕೆಯಾಗಿದ್ದು, ಬೆಳ್ಳಿಯ ದರದಲ್ಲೂ ಪ್ರತಿ ಗ್ರಾಂಗೆ 20 ರೂ.ನಷ್ಟು ಹೆಚ್ಚಳವಾಗಿದೆ. ಕಳೆದ ಮೂರು ದಿನಗಳ ದರಗಳನ್ನು ಗಮನಿಸಿದರೆ, ಚಿನ್ನ ಮತ್ತು ಬೆಳ್ಳಿಯಲ್ಲಿ ನಿರಂತರ ಏರಿಳಿತ ಕಂಡುಬಂದಿದೆ.

ಕಳೆದ ಮೂರು ದಿನಗಳಲ್ಲಿ ಚಿನ್ನ ದರ ಏರಿಳಿಕೆ ವಿವರ
ಮಾರ್ಚ್ 23: ಚಿನ್ನ 12,635 ರೂ. (ಗ್ರಾಂಗೆ), ಸಂಜೆ 13,135 ರೂ., ಬೆಳ್ಳಿ 223 ರೂ.ನಿಂದ 231 ರೂ.
ಮಾರ್ಚ್ 24: ಚಿನ್ನ 12,865 ರೂ., ಸಂಜೆ 13,100 ರೂ., ಬೆಳ್ಳಿ 226 ರೂ.
ಮಾರ್ಚ್ 25: ಚಿನ್ನ 13,445 ರೂ., ಬೆಳ್ಳಿ 246 ರೂ.
ದರಗಳಲ್ಲಿ ಈ ರೀತಿಯ ಅಸ್ಥಿರತೆ ಇದ್ದರೂ, ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಈಗಲೇ ಚಿನ್ನ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂದಿನ ದರಕ್ಕೆ ಬಂಗಾರವನ್ನು ಬುಕ್ ಮಾಡಿಕೊಂಡು, ಹಬ್ಬದ ದಿನ ಖರೀದಿಸಲು ಗ್ರಾಹಕರು ಮುಂದಾಗುತ್ತಿದ್ದಾರೆ.

ಜ್ಯುವೆಲ್ಲರಿಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50 ರಷ್ಟು ಹೆಚ್ಚಳ
ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹಲವರು ಪೂರ್ಣ ಹಣ ಪಾವತಿಸಿ ಈಗಲೇ ಚಿನ್ನ ಕಾಯ್ದಿರಿಸುತ್ತಿದ್ದು, ಆರ್ಡರ್‌ಗಳೂ ಹೆಚ್ಚುತ್ತಿರುವುದಾಗಿ ಹೇಳಲಾಗುತ್ತಿದೆ.

ಒಟ್ಟಾರೆ, ಚಿನ್ನದ ದರದ ಏರಿಳಿತ ನಡುವೆಯೇ ‘ಇದೀಗ ಇರುವ ದರವೇ ಸೂಕ್ತ’ ಎಂದು ಭಾವಿಸಿರುವ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ದರ ಇಳಿಕೆಯಾಗುತ್ತದೆಯೋ ಅಥವಾ ಮತ್ತೆ ಏರಿಕೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

Share This Article