ತುಮಕೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಲಕ್ಷ ಲಕ್ಷ ಹಣ ಪಡೆದು ನಕಲಿ ಆಫರ್ ಲೇಟರ್ ನೀಡಿ ಮೋಸ ಮಾಡುತ್ತಿದ್ದ ನಕಲಿ ನೇಮಕಾತಿ ಜಾಲವೊಂದು ತುಮಕೂರಿನಲ್ಲಿ ಪತ್ತೆಯಾಗಿದೆ.
ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂ. ಪೀಕಿ ನಕಲಿ ಆದೇಶ ಪ್ರತಿ ತಯಾರು ಮಾಡುವ ಜಾಲ ತುಮಕೂರಿನಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ. ವಡ್ಡರಹಳ್ಳಿಯ ಪ್ರಭಾವಿ ಮುಖಂಡನ ತೋಟದ ಮನೆಯ ಶೆಡ್‌ನಲ್ಲಿ ಈ ವಂಚನೆ ಜಾಲ ಠಿಕಾಣಿ ಹೂಡಿತ್ತು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಾಲವನ್ನು ಭೇದಿಸಿದ್ದಾರೆ.
ಈ ವಂಚಕರು ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆ ಕೊಡಿಸೋದಾಗಿ ಹೇಳಿ ನೂರಾರು ಯುವಕರಿಂದ ಲಕ್ಷಾಂತರ ರೂ. ಪೀಕಿಸಿದ್ದಾರೆ. ಹಂತ ಹಂತವಾಗಿ ಒಬ್ಬೊಬ್ಬರಿಂದ 10-15 ಲಕ್ಷ ರೂ. ಪೀಕಿದ್ದಾರೆ. ಅಲ್ಲದೇ ಪರಿಸರ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ನೇಗಿ ಅವರ ಸಹಿ ಇರುವ ನಕಲಿ ನೇಮಕಾತಿ ಆದೇಶ ಪ್ರತಿಯನ್ನು ತಯಾರಿಸಿ ಉದ್ಯೋಗಾಕಾಂಕ್ಷಿಗಳಿಗೆ ಕೊಟ್ಟಿದ್ದಾರೆ.
ಮೊದಲ ಹಂತದಲ್ಲಿ 15 ಜನ ಯುವಕರನ್ನು ತರಬೇತಿಗೆಂದು ತುಮಕೂರಿನ ವಡ್ಡರಹಳ್ಳಿಗೆ ಕರೆದಿದ್ದಾರೆ. ಅಲ್ಲಿ ತೋಟದಲ್ಲಿ ತರಬೇತಿ ಕೊಡುವ ನಾಟಕ ಮಾಡಿದ್ದಾರೆ. ಟ್ರೇನಿಂಗ್ ಹಂತದಲ್ಲಿ 5 ಲಕ್ಷ ರೂ. ಕೊಡಬೇಕಿತ್ತು. ಹಾಗಾಗಿ ಟ್ರೇನಿಂಗ್ ನಾಟಕ ಆಡಿ, ಥೇಟ್ ಅರಣ್ಯ ಇಲಾಖೆಯ ರೀತಿಯಲ್ಲೇ ಶೆಡ್ ತಯಾರು ಮಾಡಿದ್ದಾರೆ. ದೇವರಾಯನದುರ್ಗ, ಚಿನಗಾ ಬೆಟ್ಟಗಳಲ್ಲಿ ಟ್ರೆಕ್ಕಿಂಗ್ ಕರೆದುಕೊಂಡು ಹೋಗಿ ನಂಬಿಕೆ ಬರುವಂತೆ ಮಾಡಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಚರಣೆ ಮಾಡುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ತರಬೇತಿಗೆಂದು ಬಂದಿದ್ದ ಯುವಕರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನೆಲಮಂಗಲ ಮೂಲದ ಕಿರಣ್, ತುಮಕೂರು ನಮಸ್ತೆ ಕಾಫಿ ಅಂಗಡಿಯ ಪವನ್ ಸೇರಿದಂತೆ ಮೂವರ ವಿರುದ್ಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಎಫ್‌ಐಆರ್‌ನಲ್ಲಿ ಪ್ರಭಾವ ಮುಖಂಡನ ಹೆಸರು ಕೈ ಬಿಟ್ಟಿದ್ದಾರೆ.
