Ad image

ಪಿಂಕ್ ಮತ್ತು ಬ್ಲೂ ಲೈನ್‌ಗೆ ಬರಲಿವೆ 4 ಚಾಲಕರಹಿತ ರೈಲುಗಳು!

Team SanjeMugilu
2 Min Read

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್‌ಸಿಎಲ್ ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ. ಬೆಂಗಳೂರಿನ ಬಿಇಎಂಎಲ್  ಕಾರ್ಖಾನೆಯಿಂದ ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಒಟ್ಟು ನಾಲ್ಕು ಹೊಸ ರೈಲು ಸೆಟ್‌ಗಳು ಬಿಎಂಆರ್‌ಸಿಎಲ್ ಕೈಸೇರಲಿವೆ.

ಮೇ ತಿಂಗಳಲ್ಲಿ ಪಿಂಕ್ ಲೈನ್ ಭಾಗಶಃ ಆರಂಭ ಸಾಧ್ಯತೆ
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿಶೇಷವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಒಟ್ಟು ಆರು ಮೆಟ್ರೋ ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಈ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿದ್ದು, ಏಪ್ರಿಲ್ ವೇಳೆಗೆ ಮತ್ತೊಂದು ರೈಲು ಆಗಮಿಸಲಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಜನರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.

ಏರ್ ಪೋರ್ಟ್ ಮಾರ್ಗಕ್ಕೂ ಸಜ್ಜಾಗುತ್ತಿದೆ ಬ್ಲೂ ಲೈನ್
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 59 ಕಿ.ಮೀ ಉದ್ದದ ಬ್ಲೂ ಲೈನ್ ಮಾರ್ಗವು ಬೆಂಗಳೂರಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.

ಸಿಲ್ಕ್ ಬೋರ್ಡ್ ಟು ಕೆ.ಆರ್. ಪುರ: 19.75 ಕಿ.ಮೀ (13 ನಿಲ್ದಾಣಗಳು)
ಕೆ.ಆರ್. ಪುರ ಟು ಏರ್ ಪೋರ್ಟ್: 38 ಕಿ.ಮೀ ವಿಸ್ತೀರ್ಣ
ಈ ಬೃಹತ್ ಮಾರ್ಗಕ್ಕಾಗಿ ಒಟ್ಟು 38 ಚಾಲಕರಹಿತ ರೈಲುಗಳಿಗೆ ಬಿಇಎಂಎಲ್‌ಗೆ ಆರ್ಡರ್ ನೀಡಲಾಗಿದೆ. ಇದರ ಮೊದಲ ಹಂತವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಎರಡು ರೈಲುಗಳು ಬರಲಿವೆ ಎಂದು ತಿಳಿದುಬಂದಿದೆ.

ಮೆಟ್ರೋ ಮಾರ್ಗಗಳ ವಿಸ್ತರಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಟ್ರಾಫಿಕ್ ಸಿಟಿ ಎಂಬ ಕುಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಮೆಟ್ರೋ ಒಂದೇ ಸರಿಯಾದ ಪರಿಹಾರ. ಪಿಂಕ್ ಲೈನ್ ಬೇಗ ಆರಂಭವಾದರೆ ತಾವರೆಕೆರೆ ಮತ್ತು ಸಿಲ್ಕ್ ಬೋರ್ಡ್ ಭಾಗದ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಯಾಣಿಕರು ಆಶಯ ವ್ಯಕ್ತಪಡಿಸಿದ್ದಾರೆ.

Share This Article