ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ತಿರುವನಂತಪುರಂನಲ್ಲಿ ನಡೆದ ಎನ್‌ಡಿಎ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಬಡ ಕುಟುಂಬದ ಯಜಮಾನರು, ವಿಧವೆಯರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ 3,000 ರೂ. ಕಲ್ಯಾಣ ಪಿಂಚಣಿ ಭರವಸೆ ನೀಡಲಾಗಿದೆ. ಪ್ರತಿ ಮನೆಗೆ ತಿಂಗಳಿಗೆ 20,000 ಲೀಟರ್ ಉಚಿತ ಕುಡಿಯುವ ನೀರು ಸರಬರಾಜು, ಪೈಪ್‌ಲೈನ್ ಜಾಲಗಳ ವಿಸ್ತರಣೆ, ಬಡ ಕುಟುಂಬಗಳಿಗೆ ಓಣಂ ಮತ್ತು ಕ್ರಿಸ್‌ಮಸ್ ಸಮಯದಲ್ಲಿ ತಲಾ ಒಂದು ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು.
ಆಯುಷ್ಮಾನ್ ಭಾರತ್ ಯೋಜನೆಯಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆ, ರೈತರ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಖಚಿತಪಡಿಸಲಾಗಿದೆ. ಬಡ ಕುಟುಂಬಗಳ ಮಹಿಳೆಯರು ದಿನಸಿ ಮತ್ತು ಔಷಧಿಗಳನ್ನು ಖರೀದಿಸಲು ತಿಂಗಳಿಗೆ 2,500 ರೂ. ಮೌಲ್ಯದ ಆಹಾರ ಆರೋಗ್ಯ ಭದ್ರತಾ ಕಾರ್ಡ್, ಶಬರಿಮಲೆ ಮತ್ತು ಗುರುವಾಯೂರು ದೇವಸ್ಥಾನದಂತಹ ಪ್ರಮುಖ ದೇವಾಲಯಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ದೇವಸ್ವಂ ಮಂಡಳಿಗಳಲ್ಲಿ ಸುಧಾರಣೆಗಳು. ತಿರುವನಂತಪುರಂ ಅನ್ನು ಕಣ್ಣೂರಿಗೆ ಸಂಪರ್ಕಿಸುವ ಹೈಸ್ಪೀಡ್ ರೈಲು ಜಾಲ ನಿರ್ಮಾಣ, ಏಮ್ಸ್ ಆಸ್ಪತ್ರೆಯ ನಿರ್ಮಾಣದ ಭರವಸೆ ನೀಡಲಾಗಿದೆ. ಕೇರಳದ ಎಲ್ಲಾ 140 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
