Ad image

ಹನಿಟ್ರ್ಯಾಪ್ ಆಯ್ತು ಬೆಂಗಳೂರಿನಲ್ಲಿ ಈಗ ‘ಮನಿ ಟ್ರ್ಯಾಪ್’ ಹಾವಳಿ: ಕೆಲ ಸುಂದರಿಯರ ಬಗ್ಗೆ ಇರಲಿ ಎಚ್ಚರ..!

Team SanjeMugilu
2 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್‌ಗಳ ಹಾವಳಿ ಜೋರಾಗಿದೆ. ಅದರ ಮುಂದುವರಿದ ಭಾಗವಾಗಿ ‘ಮನಿ ಟ್ರ್ಯಾಪ್’ (Money Trap) ಎಂಬ ಹೊಸ ದಂಧೆ ಶುರುವಾಗಿದೆ. ಮುಗ್ದ ಯುವಕರನ್ನು, ಅದರಲ್ಲೂ ವಿಶೇಷವಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ಟಾರ್ಗೆಟ್ ಮಾಡುತ್ತಿರುವ ಈ ಗ್ಯಾಂಗ್, ಕ್ಷಣಾರ್ಧದಲ್ಲಿ ಸಾವಿರಾರು ರೂಪಾಯಿ ಲೂಟಿ ಮಾಡುತ್ತಿದೆ.

ಹೇಗೆ ನಡೆಯುತ್ತೆ?
ಈ ಗ್ಯಾಂಗ್‌ನ ಮೊದಲ ಅಸ್ತ್ರವೇ ಟಿಂಡರ್ ನಂತಹ ಡೇಟಿಂಗ್ ಆಪ್‌ಗಳು. ಸುಂದರ ಯುವತಿಯರ ಫೋಟೋ ಬಳಸಿ ಯುವಕರನ್ನು ಸೆಳೆಯಲಾಗುತ್ತದೆ. ಮೊದಲು ಪರಿಚಯ ಮಾಡಿಕೊಳ್ಳುವ ಯುವತಿಯರು, ಬಳಿಕ ನೈಸ್ ಆಗಿ ಪ್ರೀತಿಯ ಮಾತುಗಳನ್ನಾಡಿ ನಂಬಿಕೆ ಗಳಿಸುತ್ತಾರೆ. ನಾವಿಬ್ಬರೂ ಮೀಟ್ ಮಾಡೋಣ ಎಂದು ನಂಬಿಸಿ, ತಾವೇ ಒಂದು ಪಬ್ ಲೊಕೇಷನ್ ಕಳುಹಿಸುತ್ತಾರೆ.
ಯುವಕ ಪಬ್‌ಗೆ ಬಂದಿದ್ದೇ ತಡ, ಆತನ ಜೊತೆ ರೋಮ್ಯಾಂಟಿಕ್ ಆಗಿ ಮಾತನಾಡುತ್ತಾ ಸಾಲು ಸಾಲು ಡ್ರಿಂಕ್ಸ್ ಆರ್ಡರ್ ಮಾಡುತ್ತಾರೆ. ಕೇವಲ 20-30 ನಿಮಿಷಗಳಲ್ಲಿ 4-5 ಟೆಕೀಲಾ ಶಾಟ್ಸ್  ಕುಡಿದು ವಾಶ್ ರೂಂಗೆ ಹೋಗಿ ಬರ್ತೀನಿ ಎಂದು ಎಸ್ಕೇಪ್ ಆಗುತ್ತಾರೆ.

ಇತ್ತೀಚೆಗೆ ಬೆಳ್ಳಂದೂರು ಭಾಗದ ಪಬ್ ಒಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಪಬ್ ಸಿಬ್ಬಂದಿ ಬರೋಬ್ಬರಿ 65 ಸಾವಿರ ರೂಪಾಯಿ ಬಿಲ್ ನೀಡಿದ್ದಾರೆ. ನಾಲ್ಕೈದು ಶಾಟ್ಸ್‌ಗೆ ಇಷ್ಟೊಂದು ಬಿಲ್ ಕಂಡು ಟೆಕ್ಕಿ ಗಾಬರಿಯಾಗಿದ್ದಾರೆ. ಪ್ರಶ್ನೆ ಮಾಡಿದರೆ, ಬಿಲ್ ಕಟ್ಟು ಇಲ್ಲದಿದ್ದರೆ ಪೊಲೀಸರನ್ನು ಕರೆಯಿಸುತ್ತೇವೆ ಎಂದು ಪಬ್ ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ. ಮಾನ-ಮರ್ಯಾದೆಗೆ ಅಂಜಿ ಆ ಟೆಕ್ಕಿ 65 ಸಾವಿರ ಪಾವತಿಸಿ ಅಲ್ಲಿಂದ ಹೊರಬಂದಿದ್ದಾರೆ.

ಇದೇ ರೀತಿ ಉತ್ತರ ಕರ್ನಾಟಕ ಮೂಲದ ಯುವಕನೊಬ್ಬನನ್ನೂ ಟ್ರ್ಯಾಪ್ ಮಾಡಲಾಗಿತ್ತು. ಆತನಿಗೆ 37 ಸಾವಿರ ರೂಪಾಯಿ ಬಿಲ್ ನೀಡಲಾಗಿತ್ತು. ಆ ಯುವಕ ಹೆದರದೆ ಸ್ಥಳದಲ್ಲೇ ಗಲಾಟೆ ಮಾಡಿ 112 (ಹೊಯ್ಸಳ ಪೊಲೀಸರಿಗೆ) ಕರೆ ಮಾಡಿದ್ದಾನೆ. ಪೊಲೀಸರು ಬಂದು ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸದೆ ನಂತರ ಮಾತನಾಡೋಣ ಎಂದು ಕಳುಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪೊಲೀಸರು ಮತ್ತು ಪಬ್ ಸಿಬ್ಬಂದಿ ಶಾಮೀಲು?
ಘಟನೆ ನಡೆದು ನಾಲ್ಕೈದು ದಿನಗಳಾದರೂ ಈ ಸಂಬಂಧ ಪೊಲೀಸರು ಯಾವುದೇ ಎಫ್‌ಐಆರ್ ದಾಖಲಿಸಿಲ್ಲ. ಈ ಮನಿ ಟ್ರ್ಯಾಪ್ ದಂಧೆಯ ಹಿಂದೆ ಪಬ್ ಮಾಲೀಕರು, ಕಿರಾತಕ ಯುವತಿಯರು ಮತ್ತು ಕೆಲ ಪೊಲೀಸರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಡೇಟಿಂಗ್ ಆಪ್‌ಗಳಲ್ಲಿ ಅಪರಿಚಿತ ಯುವತಿಯರು ಕರೆದ ತಕ್ಷಣ ಅವರು ಹೇಳಿದ ಪಬ್‌ಗಳಿಗೆ ಹೋಗಬೇಡಿ. ಇಂತಹ ವಂಚಕ ಗ್ಯಾಂಗ್‌ಗಳ ಬಗ್ಗೆ ಎಚ್ಚರದಿಂದಿರಿ. ಒಂದು ವೇಳೆ ಇಂತಹ ಘಟನೆ ನಡೆದರೆ ತಕ್ಷಣ ಧೈರ್ಯವಾಗಿ ದೂರು ನೀಡಿ.

Share This Article