Ad image

ವಾರ್ ಎಫೆಕ್ಟ್‌ನಿಂದ EVಗೆ ಹೆಚ್ಚಿದ ಡಿಮ್ಯಾಂಡ್ – ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ ವಾಹನಗಳು ಸೇಲ್

Team SanjeMugilu
1 Min Read

ಬೆಂಗಳೂರು: ಮಧ್ಯಪ್ರಾಚ್ಯ ಯುದ್ದ ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ. ಪೆಟ್ರೋಲ್, ಡಿಸೇಲ್ ಸಿಗದೇ ಒದ್ದಾಡುತ್ತಿರುವ ಜನ ಇವಿ ವಾಹನಗಳ ಮೊರೆ ಹೋಗಿದ್ದಾರೆ. ಇದರಿಂದ ಒಂದೇ ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ ವಾಹನಗಳು ಮಾರಾಟವಾಗಿವೆ.

ಯುದ್ಧದಿಂದಾಗಿ ಒಂದೆಡೆ ಜನ ಅಡುಗೆ ಮನೆಗೆ ಸಿಲಿಂಡರ್ ಸಿಗದೇ ಒದ್ದಾಡುತ್ತಿದ್ರೇ, ಮತ್ತೊಂದೆಡೆ ಪೆಟ್ರೋಲ್, ಡಿಸೇಲ್ ಸಿಗದೇ ವಾಹನದಲ್ಲಿ ಹಿಂದೂ ಮುಂದು ನೋಡುವಂತಾಗಿದೆ. ಹೀಗಾಗಿ ರಾಜ್ಯದ ಜನ ನಿಧಾನವಾಗಿ ಎಲೆಕ್ಟ್ರಿಕ್ ವೆಹಿಕಲ್ಸ್‌ನತ್ತ ಮುಖ ಮಾಡಿದ್ದು, ಕಳೆದ ಒಂದು ತಿಂಗಳಿನಿಂದ ಇವಿ ವೆಹಿಕಲ್ಸ್‌ಗಳ ಮಾರಾಟ, ಬುಕ್ಕಿಂಗ್ ಹೆಚ್ಚಾಗಿದೆ.

ಇರಾನ್-ಇಸ್ರೇಲ್-ಅಮೇರಿಕಾ ಕದನಕ್ಕೆ ಸದ್ಯಕ್ಕೆ ವಿರಾಮ ಬೀಳುತ್ತಿಲ್ಲ. ಈ ದೀರ್ಘಕಾಲದ ಯುದ್ದದ ಪರಿಣಾಮ ರಾಜ್ಯದ ಮೇಲೆ ಬಿದ್ದಿದ್ದು ಜನಸಾಮಾನ್ಯರು ತತ್ತರಿಸುವಂತಾಗಿದೆ. ಪ್ರಮುಖವಾಗಿ ಪೆಟ್ರೋಲ್, ಡಿಸೇಲ್, ಸಿಎನ್‌ಜಿಗಾಗಿ ಕಿಲೋಮೀಟರ್‌ಗಟ್ಟಲೇ ಕ್ಯೂ ಹಚ್ಚಿ ನಿಲ್ಲೋ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಜನ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕಳೆದ ಮಾರ್ಚ್ 1ರಿಂದ 31ರವರೆಗೆ 28,765 ಎಲೆಕ್ಟ್ರಿಕ್ ವಾಹನಗಳು ರೆಜಿಸ್ಟ್ರೇಷನ್ ಆಗಿದ್ದು, ನಿಧಾನವಾಗಿ ಇವಿ ವೆಹಿಕಲ್ಸ್ಗಳನ್ನು ಕೊಳ್ಳುವುವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೂಲಕ ಕಳೆದ ತಿಂಗಳವರೆಗೆ 7,56,637 ಎಲೆಕ್ಟ್ರಿಕ್ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿವೆ.

ಈ ಹಿಂದೆ ಇವಿ ವಾಹನಗಳೆಂದ್ರೇ ಮೂಗು ಮುರಿಯೋರು ಎಲೆಕ್ಟ್ರಿಕ್ ವಾಹನಗಳತ್ತ ಹೊರಳುತ್ತಾ ಇದ್ದಾರೆ. ಇನ್ನೂ ಇವಿ ಬೈಕ್, ಇವಿ ಕಾರ್, ಇವಿ ಬಸ್ ಸೇರಿದಂತೆ ದಿನದಿಂದ ದಿನಕ್ಕೆ ಇವಿ ವಾಹನಗಳ ಬುಕ್ಕಿಂಗ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಕರ್ನಾಟಕ ಮೋಟಾರು ವಾಹನಗಳ ತೆರಿಗೆ(ತಿದ್ದುಪಡಿ) ವಿಧೇಯಕ-2026ರ ಪ್ರಕಾರ 10 ಲಕ್ಷ ರೂ.ವರೆಗಿನ ಇವಿ ವಾಹನಗಳಿಗೆ 5% ಪ್ರತಿಶತ ತೆರಿಗೆ, 10 ಲಕ್ಷ ರೂ.ಯಿಂದ 25 ಲಕ್ಷ ರೂ.ವರೆಗಿನ ವಾಹನಗಳಿಗೆ 8 % ಪ್ರತಿಶತ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ. ಈ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತವೊಂದೇ ಬಾಕಿಯಿದೆ. ಈ ಹಿನ್ನೆಲೆ ಇವಿ ವೆಹಿಕಲ್‌ಗಳ ಬೆಲೆ ಹೆಚ್ಚಳವಾಗ್ತಿರೋದ್ರಿಂದ, ಜನ ಎಲೆಕ್ಟ್ರಿಕ್ ವಾಹನಗಳನ್ನು ಬೇಗ ಬೇಗ ಬುಕ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಯುದ್ಧದಿಂದಾಗಿ ಜನ ಪರಿಸರಸ್ನೇಹಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ.

Share This Article