Ad image

ಬದುಕಿದ್ದರೂ ದಾಖಲೆಯಲ್ಲಿ ‘ಮೃತ’: ಅಧಿಕಾರಿಗಳ ಎಡವಟ್ಟಿಗೆ ಹಂಪಮ್ಮ ಪರದಾಟ

Team SanjeMugilu
1 Min Read

ಹೊಸಪೇಟೆ: ಜೀವಂತವಾಗಿದ್ದರೂ ಮಹಿಳೆಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿ, ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಿದ ಹೊಸಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ಈ ದುರಾಡಳಿತದ ಬಲಿಪಶು. ಅದೇ ಗ್ರಾಮದ ಎನ್. ತಿಮ್ಮಾರೆಡ್ಡಿ ಅವರ ಪತ್ನಿ ಹಂಪಮ್ಮ ಎಂಬುವವರು 2024 ರಲ್ಲಿ ನಿಧನರಾಗಿದ್ದರು. ಆದರೆ, ಅಧಿಕಾರಿಗಳು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ, ದಾಖಲೆಗಳಲ್ಲಿ ಸಂತ್ರಸ್ತೆ ಎನ್. ಹಂಪಮ್ಮ ಅವರನ್ನೇ ಮೃತ ಎಂದು ನಮೂದಿಸಿದ್ದರು.

ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು ಹಂಪಮ್ಮ ಅವರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಆಧಾರ್ ಕಾರ್ಡ್‌ನಲ್ಲಿನ ದೋಷ ಸರಿಪಡಿಸಿ, ತಮಗೆ ಸಿಗಬೇಕಾದ ಸರ್ಕಾರಿ ಯೋಜನೆಗಳ ಲಾಭ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸಿರಲಿಲ್ಲ. ಈ ಕುರಿತು ಏಪ್ರಿಲ್ 1 ರಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಘಟನೆಯನ್ನು ‘ದುರಾಡಳಿತ’ ಮತ್ತು ‘ಕರ್ತವ್ಯ ಲೋಪ’ ಎಂದು ಪರಿಗಣಿಸಿರುವ ಉಪ ಲೋಕಾಯುಕ್ತರು ಕೆಲವೊಂದು ನಿರ್ದೇಶನಗಳನ್ನು ನೋಡಿದ್ದಾರೆ. ಹೊಸಪೇಟೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ (EO) ಮತ್ತು ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿಯ ಪಿಡಿಒ (PDO) ಅವರಿಗೆ ನೋಟಿಸ್ ನೀಡಲಾಗಿದ್ದು, ಮೇ 20, 2026 ರಂದು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಲಾಗಿದೆ. ಹಂಪಮ್ಮ ಅವರ ಆಧಾರ್ ಕಾರ್ಡ್ ದೋಷಗಳನ್ನು ಕೂಡಲೇ ಸರಿಪಡಿಸಿ, ಅವರಿಗೆ ಸವಲತ್ತುಗಳು ಸಿಗುವಂತೆ ಮಾಡಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತು, ಆದೇಶದ ಪ್ರತಿಯನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೂ ರವಾನಿಸಲಾಗಿದೆ.

Share This Article