ಕಲಬುರಗಿ : ಬಿಸಿಲನಾಡು ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಮಾಜಿ ಸಚಿವರ ಸಂಬಂಧಿಕ ರಸ್ತೆಯಲ್ಲೇ ಹೆಣವಾಗಿದ್ದಾನೆ. ಕಲಬುರಗಿ ನಗರದ ಪಿ & ಟಿ ಕಾಲೋನಿ ಬಳಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ಬಳಿ ತಡರಾತ್ರಿ ಈ ಭೀಕರ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಮಾಜಿ ಸಚಿವ ರೇವೂನಾಯಕ ಬೆಳಮಗಿ ಸಂಬಂಧಿಕನಾದ ಅನಿಲ ರಾಠೋಡ್ (45) ಎಂಬಾತನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ವರದಿ ಆಗಿದೆ.
ಮಾಜಿ ಸಚಿವರ ಸಂಬಂಧಿಕನ ಬರ್ಬರ ಹತ್ಯೆ
ಕಲಬುರಗಿ ನಗರದ ಪಿ & ಟಿ ಕಾಲೋನಿ ಬಳಿಯ ವೆಂಕಟೇಶ್ವರ ಕಾಂಪ್ಲೆಕ್ಸ್ನಲ್ಲಿ ತಡರಾತ್ರಿ ನೆತ್ತರು ಹರಿದಿದೆ. ಮಾಜಿ ಸಚಿವ ರೇವೂನಾಯಕ ಬೆಳಮಗಿ ಸಂಬಂಧಿಯಾಗಿರೋ ಅನಿಲ ರಾಠೋಡ್ (45) ಅವರನ್ನು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಹಣಕಾಸಿನ ವಿಚಾರಕ್ಕೆ ಕೊಲೆ ಶಂಕೆ
ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಅನಿಲ ರಾಠೋಡ್ ನನ್ನು ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿರುವ ಮೃತ ಅನಿಲನ ಕಚೇರಿಗೆ ನುಗ್ಗಿದ ಹಂತಕರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.
ಆಟೋದಲ್ಲಿ ಬಂದು ಕೊಲೆಗೈದು ಎಸ್ಕೇಪ್
ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕೊ ಟೀಮ್, ಡಾಗ್ ಸ್ಕಾಡ್ ನಿಂದಲೂ ತೀವ್ರ ಪರಿಶೀಲನೆ ನಡೆದಿದೆ.
ಸ್ಟೇಷನ್ ಬಜಾರ್ ಪೊಲೀಸರ ಭೇಟಿ, ಪರಿಶೀಲನೆ
ಆಟೋದಲ್ಲಿ ಬಂದು ಕೊಲೆ ಮಾಡಿ ಎಸ್ಕೇಪ್ ಆದ ಹಂತಕರ ಗ್ಯಾಂಗ್ಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯಲ್ಲಿ ಮತ್ತೆ ಹರಿದ ನೆತ್ತರು; ಮಾಜಿ ಸಚಿವರ ಸಂಬಂಧಿಕನ ಬರ್ಬರ ಹತ್ಯೆ
