ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡದಲ್ಲಿ 2017 ರಲ್ಲಿ ನಡೆದಿದ್ದ ದರೋಡೆ ಮತ್ತು ಕೊಲೆ ಪ್ರಕರಣದ ತೀರ್ಪು ಪ್ರಕಟವಾಗಿದ್ದು ಅಲೆಮಾರಿ ದರೋಡೆ ಗ್ಯಾಂಗ್‌ನ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜಿಲ್ಲೆಯ ಜನರನ್ನ ಬೆಚ್ಚಿಬೀಳಿಸಿದ್ದ ಪ್ರಕರಣದ ತೀರ್ಪು ಪ್ರಕಟವಾಗಿದೆ.
ಆರೋಪಿ ಹಶ್ಯಾ ಅಲಿಯಾಸ್ ರಮೇಶ್‌ಗೆ ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಕದ್ದ ಚಿನ್ನಾಭರಣ ಕೊಳ್ಳುತ್ತಿದ್ದ ಆರೋಪಿ ಮೌನೇಶ್‌ಗೆ 2 ವರ್ಷ ಜೈಲು 20 ಸಾವಿರ ದಂಡ ವಿಧಿಸಿ ರಾಯಚೂರಿನ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ದರೋಡೆ ವೇಳೆ ತಡೆಯಲು ಮುಂದಾದ ಮನೆ ಮಾಲೀಕ ಡಾಕ್ಯಾನಾಯಕ್ ಎದೆಗೆ ಚಾಕು ಚುಚ್ಚು ಪರಾರಿಯಾಗಿದ್ದರು, ಡಾಕ್ಯಾನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೂವರು ಪುರುಷರು ಇಬ್ಬರು ಮಹಿಳೆಯರಿದ್ದ 5 ಜನರ ಪಾರ್ದಿ ಗ್ಯಾಂಗ್ ಈ ಕೃತ್ಯ ಎಸಗಿತ್ತು. 50 ಸಾವಿರ ರೂ. ನಗದು ಹಣ, 30,400 ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ಮೂಲದ ಎಲ್ಲಾ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು. ಆದ್ರೆ ಆರೋಪಿಗಳಾದ ಇಸ್ರಾಮ್, ಪಲ್ಲು ಗೋವಿಂದ ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು ಇನ್ನೂ ಪತ್ತೆಯಾಗಿಲ್ಲ.
ಇನ್ನೂ ಮಹಿಳಾ ಆರೋಪಿಗಳಾದ ಗೌರಿತಾಯಿ, ಶಿಶಬಾಯಿ ಜಾಮೀನು ಪಡೆದ ಬಳಿಕ ನಾಪತ್ತೆಯಾಗಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಪ್ರಕರಣದ ಇಬ್ಬರು ಆರೋಪಿಗಳಿಗೆ ಮಾತ್ರ ಶಿಕ್ಷೆ ಪ್ರಕಟವಾಗಿದೆ. ಜಿಲ್ಲೆಯ ಹಲವೆಡೆ ಕಳ್ಳತನ ಮಾಡಿಕೊಂಡು ಓಡಾಡಿಕೊಂಡಿದ್ದ ಅಲೆಮಾರಿ ಗ್ಯಾಂಗ್ ಕದ್ದ ಚಿನ್ನಾಭರಣವನ್ನ ಮೌನೇಶ್‌ಗೆ ನೀಡಿ ಹಣ ಪಡೆಯುತ್ತಿದ್ದರು. 2017 ರಲ್ಲಿ ಅಲೆಮಾರಿ ಪರ್ದಿ ಗ್ಯಾಂಗ್‌ನ ಹಾವಳಿಗೆ ರಾಯಚೂರು ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದರು.
