Ad image

ಬೆಂಗಳೂರಲ್ಲಿ ‘ಟೋಯಿಂಗ್ ಆಪರೇಷನ್’ ಸ್ಟಾರ್ಟ್! ಸಿಕ್ಕಸಿಕ್ಕಲ್ಲಿ ನಿಲ್ಲಿಸಿದ್ರೆ ನಿಮ್ಮ ಗಾಡಿ ಸೇಫ್ ಅಲ್ಲ..!

Team SanjeMugilu
1 Min Read

ಬೆಂಗಳೂರು: ರಾಜಧಾನಿಯ ರಸ್ತೆಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಚಾಲಕರಿಗೆ ಇನ್ಮುಂದೆ ದಂಡದ ಬಿಸಿ ತಟ್ಟಲಿದೆ. ದೀರ್ಘಕಾಲದ ವಿರಾಮದ ನಂತರ ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ (ಸೋಮವಾರ) ಅಧಿಕೃತವಾಗಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭಗೊಂಡಿದೆ.

ಜಿಬಿಎ, ಸಂಚಾರಿ ಪೊಲೀಸರ ಜಂಟಿ ಆಪರೇಷನ್
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಮತ್ತು ಪಾದಚಾರಿ ಮಾರ್ಗ ಹಾಗೂ ರಸ್ತೆಬದಿಯ ಅನಧಿಕೃತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಜಿಬಿಎ (ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ) ಮತ್ತು ಸಂಚಾರಿ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಚಾಲನೆ ನೀಡಿವೆ. ಇತ್ತೀಚೆಗಷ್ಟೇ ಪ್ರಾಯೋಗಿಕವಾಗಿ ಕೇಂದ್ರ ನಗರ ವ್ಯಾಪ್ತಿಯಲ್ಲಿ ಟೋಯಿಂಗ್ ಮಾಡಲಾಗಿತ್ತು. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ನಗರದಾದ್ಯಂತ ಇದನ್ನು ಜಾರಿಗೆ ತರಲಾಗಿದೆ.

ಯಾವ ವಾಹನಕ್ಕೆ ಎಷ್ಟು ದಂಡ?
ಅನಧಿಕೃತವಾಗಿ ಪಾರ್ಕಿಂಗ್ ಮಾಡಿದ ವಾಹನಗಳಿಗೆ ಈ ಕೆಳಗಿನಂತೆ ಶುಲ್ಕ ಹಾಗೂ ದಂಡ ವಿಧಿಸಲಾಗುತ್ತದೆ.
ಬೈಕ್ (ದ್ವಿಚಕ್ರ ವಾಹನ): 650 (ದಂಡ ಮತ್ತು ಟೋಯಿಂಗ್ ಶುಲ್ಕ ಸೇರಿ)
ಕಾರು (ನಾಲ್ಕು ಚಕ್ರದ ವಾಹನ): 1000 (ದಂಡ ಮತ್ತು ಟೋಯಿಂಗ್ ಶುಲ್ಕ ಸೇರಿ)
ಶುಲ್ಕದ ಹಂಚಿಕೆ ಹೇಗೆ?
ಟೋಯಿಂಗ್ ಮೂಲಕ ಸಂಗ್ರಹವಾಗುವ ಹಣದಲ್ಲಿ ದಂಡದ ಮೊತ್ತವು ಪೊಲೀಸ್ ಇಲಾಖೆಗೆ ಸೇರಲಿದ್ದು, ಟೋಯಿಂಗ್ ಮಾಡಿದ ಶುಲ್ಕದ ಹಣವು ನಗರ ಪಾಲಿಕೆಯ ಖಜಾನೆಗೆ ಸೇರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ತಲಾ ಎರಡು ಟೋಯಿಂಗ್ ವಾಹನಗಳನ್ನು ಪೊಲೀಸರಿಗೆ ನೀಡಲಾಗಿದೆ. ಉತ್ತರ ಮತ್ತು ಕೇಂದ್ರ ನಗರ ಪಾಲಿಕೆ ವಿಭಾಗಗಳಿಂದ ಈಗಾಗಲೇ ಟೋಯಿಂಗ್ ವಾಹನಗಳನ್ನು ಸಂಚಾರಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಖ್ಯವಾಗಿ, ರಸ್ತೆಬದಿಯಲ್ಲಿ ಅನಾಥವಾಗಿ ಬಿದ್ದಿರುವ ವಾಹನಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಂತಹ ವಾಹನಗಳನ್ನು ಮೊದಲು ತೆರವುಗೊಳಿಸಲು ಸೂಚಿಸಲಾಗಿದೆ.

ಸವಾರರಿಗೆ ಕಟ್ಟುನಿಟ್ಟಿನ ಸೂಚನೆ
ನಿರ್ದಿಷ್ಟ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವ ‘ಪಾರ್ಕಿಂಗ್ ಬೇ’ (Parking Bays) ಪ್ರದೇಶಗಳನ್ನು ಹೊರತುಪಡಿಸಿ, ಬೇರೆಲ್ಲಿಯೂ ವಾಹನಗಳನ್ನು ನಿಲ್ಲಿಸಬಾರದು. ಅನಧಿಕೃತ ಪಾರ್ಕಿಂಗ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಬಿಎ ಆಯುಕ್ತರು ಸಂಚಾರಿ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Share This Article