ಬೆಂಗಳೂರು: ರಾಜಧಾನಿಯ ಬಸವನಗುಡಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಮನೆಯ ಮೊದಲನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಪವಾಡದಂತೆ ಪ್ರಾಣಾಪಾಯದಿಂದ ಪಾರಾಗಿದೆ. ನವೀನ್ ಮತ್ತು ಜಯಶ್ರೀ ದಂಪತಿಯ ಪುತ್ರಿ ಸಹನಾ ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಘಟನೆ ಹಿನ್ನೆಲೆ ಆಟೋ ಚಾಲಕರಾಗಿರುವ ನವೀನ್ ಹಾಗೂ ಜಯಶ್ರೀ ದಂಪತಿಗೆ ಮದುವೆಯಾಗಿ ಎರಡು ವರ್ಷಗಳಾಗಿವೆ. ಸಹನಾ ಇವರ ಏಕೈಕ ಮಗು. ಇಂದು ಮನೆಯಲ್ಲಿ ಜಯಶ್ರೀ ಅವರು ಒಲೆಯ ಮೇಲೆ ಹಾಲು ಕಾಯಿಸಲು ಇಟ್ಟಿದ್ದರು. ಹಾಲಿನ ಉರಿ ಕಡಿಮೆ ಮಾಡಲು ಜಯಶ್ರೀ ಅವರು ಅಡುಗೆ ಮನೆಗೆ ತೆರಳಿದ್ದಾರೆ. ಈ ಕೆಲವೇ ನಿಮಿಷಗಳ ಅವಧಿಯಲ್ಲಿ ಹೊರಗಡೆ ಆಟವಾಡುತ್ತಿದ್ದ ಮಗು ಸಹನಾ, ಅಲ್ಲಿಯೇ ಇದ್ದ ಚೇರ್ ಮೇಲೆ ಹತ್ತಿದ್ದಾಳೆ. ಈ ವೇಳೆ ಆಯತಪ್ಪಿ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ.
ಮಗು ಕೆಳಗೆ ಬಿದ್ದಿದ್ದನ್ನು ಕಂಡ ತಾಯಿ ಜಯಶ್ರೀ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಗುವಿನ ಸ್ಥಿತಿಯನ್ನು ಕಂಡು ಅವರಿಗೆ ರಕ್ತದೊತ್ತಡ ಕಡಿಮೆಯಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಮಗುವನ್ನು ಬಸವನಗುಡಿಯ ರಂಗದೊರೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಲೆಗೆ ಪೆಟ್ಟಾಗಿದ್ದು, ಮೂರು ಹೊಲಿಗೆಗಳನ್ನು ಹಾಕಲಾಗಿದೆ. ಸದ್ಯ ಮಗುವನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಂದೆ ನವೀನ್ ಹೇಳಿಕೆ ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಗುವಿನ ತಂದೆ ನವೀನ್, ನಾನು ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದೇನೆ. ನಮಗೆ ಮಗು ಅಂದ್ರೆ ಪ್ರಾಣ. ಮನೆಯಲ್ಲಿ ಪತ್ನಿ ಹಾಲು ಕಾಯಿಸಲು ಹೋದಾಗ ಅನಾಹುತ ನಡೆದಿದೆ. ಚೇರ್ ಹತ್ತಿ ಮಗು ಕೆಳಗೆ ಬಿದ್ದಿದೆ. ಇಲ್ಲಿ ಯಾರದ್ದೂ ತಪ್ಪಿಲ್ಲ. ಡಾಕ್ಟರ್ ಮಗು ಈಗ ಸುರಕ್ಷಿತವಾಗಿದೆ, ‘ಔಟ್ ಆಫ್ ಡೇಂಜರ್’ ಎಂದು ಹೇಳಿದ್ದಾರೆ. ತಲೆಗೆ ಸ್ವಲ್ಪ ಗಾಯವಾಗಿದೆ ಹೊರತು ಬೇರೆ ಎಲ್ಲೂ ತೊಂದರೆಯಾಗಿಲ್ಲ ಎಂದಿದ್ದಾರೆ.
