ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ, ಅತ್ಯಂತ ಕರುಣಾಜನಕ ಘಟನೆಯೊಂದು ಬೆಳಕಿಗೆ ಬಂದಿದೆ. ವೃದ್ಧರೊಬ್ಬರು ಮೃತಪಟ್ಟು ಹತ್ತು ದಿನಗಳ ಕಳೆದರೂ, ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಪತಿಯ ಮೃತದೇಹದ ಜೊತೆಯಲ್ಲೇ ಹತ್ತು ದಿನ ಕಳೆದಿದ್ದಾರೆ. ಕೊಳೆತು ಹುಳ ಹಿಡಿದಿದ್ದರೂ ಪತಿ ನಿಧನರಾಗಿದ್ದಾರೆಂಬ ಅರಿವೇ ಆಕೆಗೆ ಇರಲಿಲ್ಲ ಎಂಬುದು ದುರಂತದ ಸಂಗತಿ.
ಏನಿದು ಘಟನೆ? ಕೊಟ್ಟಿಗೆಹಾರದ ನಿವಾಸಿ 77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಬಳಲುತ್ತಿದ್ದರು. ಸುಮಾರು 10 ದಿನಗಳ ಹಿಂದೆ ಅವರು ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಆದರೆ ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಾಗಿದ್ದ ಕಾರಣ, ತನ್ನ ಪತಿ ಮೃತಪಟ್ಟಿದ್ದಾರೆ ಎಂಬ ವಿಷಯವೇ ಆಕೆಗೆ ತಿಳಿದಿರಲಿಲ್ಲ. ತನ್ನ ಪತಿ ಮಲಗಿದ್ದಾರೆ ಎಂದೇ ಭಾವಿಸಿದ ಆಕೆ, ಅಷ್ಟೂ ದಿನ ಕೊಳೆಯುತ್ತಿದ್ದ ಮೃತದೇಹದ ಜೊತೆಯೇ ವಾಸವಾಗಿದ್ದರು. ಮಕ್ಕಳಿದ್ದರೂ ಅನಾಥವಾದ ವೃದ್ಧ ಸಿರಿಲ್ ಮೋನಿಸ್ ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರೆ, ಮಗಳು ದೂರದ ದುಬೈನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಗ ನಿತ್ಯವೂ ಅಮ್ಮನಿಗೆ ಫೋನ್ ಮಾಡುತ್ತಿದ್ದ. ಪ್ರತಿ ಬಾರಿ ಕರೆ ಮಾಡಿದಾಗಲೂ ತಾಯಿ ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ ಎಂದೇ ಹೇಳುತ್ತಿದ್ದರು. ಸುಮಾರು 15 ದಿನಗಳ ಹಿಂದಷ್ಟೇ ಮಗ ಮನೆಗೆ ಬಂದು ನಾಲ್ಕು ದಿನ ತಂದೆ-ತಾಯಿಯ ಜೊತೆಗಿದ್ದು ಮರಳಿದ್ದ. ಈ ಹತ್ತು ದಿನಗಳಲ್ಲಿ ನಡೆದ ಅನಾಹುತ ಯಾರಿಗೂ ತಿಳಿಯಲೇ ಇಲ್ಲ. ವಾಸನೆ ಬಂದಾಗ ಬಯಲಾದ ಸತ್ಯ ಮನೆ ಒಳಗಿನಿಂದ ವಿಪರೀತ ವಾಸನೆ ಬರತೊಡಗಿದಾಗ ಮತ್ತು ಹುಳ ಬಿದ್ದ ಸ್ಥಿತಿಯನ್ನು ಕಂಡು ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಪತ್ನಿ ಶ*ವವನ್ನು ಮುಟ್ಟಲು ಬಿಡದೆ ನನ್ನ ಗಂಡ ನನಗೆ ಬೇಕು ಎಂದು ಹಠ ಹಿಡಿದಿದ್ದಾರೆ. ಕೊನೆಗೆ ಪೊಲೀಸರು ಮನವೊಲಿಸಿ ಶ*ವವನ್ನು ವಶಕ್ಕೆ ಪಡೆದರು.
ಮೃತದೇಹ ಸಂಪೂರ್ಣ ಕೊಳೆತು ಹುಳ ಬಿದ್ದಿದ್ದರಿಂದ ಸ್ಥಳೀಯರು ಯಾರೂ ಮೃತದೇಹವನ್ನು ಮುಟ್ಟಲು ಮುಂದೆ ಬರಲಿಲ್ಲ. ಈ ಸಂದರ್ಭದಲ್ಲಿ ಸಮಾಜ ಸೇವಕ ಆರೀಫ್ ಅವರು ಮುಂದೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ನೆರವಾದರು. ಬಳಿಕ ಬಣಕಲ್‌ನ ಕ್ರೈಸ್ತ ಸ್ಮಶಾನದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ತಂದೆ ಸತ್ತ ಸುದ್ದಿ ತಿಳಿದು ಸಂಜೆ ವೇಳೆಗೆ ಊರಿಗೆ ಬಂದ ಮಗನಿಗೆ ಅಪ್ಪನ ಮುಖವನ್ನು ಕೊನೆಯದಾಗಿ ನೋಡುವ ಅವಕಾಶವೂ ಸಿಗಲಿಲ್ಲ. ಅಷ್ಟರಲ್ಲಾಗಲೇ ಶವ ವಿಪರೀತವಾಗಿ ಕೊಳೆತಿದ್ದರಿಂದ ಮುಚ್ಚಿದ ಸ್ಥಿತಿಯಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು. ಮಗಳು ಅಪ್ಪನ ಸಾ*ನ ಸಮಯದಲ್ಲೂ ಬರಲಾಗದ ಸ್ಥಿತಿಯಲ್ಲಿದ್ದರು. ಇಬ್ಬರು ಮಕ್ಕಳಿದ್ದರೂ ಸಿರಿಲ್ ಮೋನಿಸ್ ಅವರ ಸಾ*ವು ಮತ್ತು ಅಂತ್ಯಕ್ರಿಯೆ ಅತ್ಯಂತ ದೌರ್ಭಾಗ್ಯದ ಸಂಗತಿಯಾಗಿತ್ತು. ಈ ಘಟನೆಯು ಆಧುನಿಕ ಜಗತ್ತಿನಲ್ಲಿ ಒಂಟಿಯಾಗಿ ವಾಸಿಸುವ ವೃದ್ಧರ ಸ್ಥಿತಿ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುವವರ ಅಸಹಾಯಕತೆಯನ್ನ ಬಿಂಬಿಸುವಂತಿದೆ.
