Ad image

ಬೆಂಗಳೂರಲ್ಲಿ ಎಲ್‌ಪಿಜಿ ಹಾಹಾಕಾರ: ಆಟೋ ಚಾಲಕರ ಬೆನ್ನಲ್ಲೇ ಇನ್ಶೂರೆನ್ಸ್ ಏಜೆಂಟರೂ ಕಂಗಾಲು!

Team SanjeMugilu
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್‌ಪಿಜಿ  ಸಿಗದೆ ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಗ್ಯಾಸ್ ಅಭಾವವು ಈಗ ವಿಮಾ ಏಜೆಂಟ್‌ಗಳ ನಿದ್ದೆಗೆಡಿಸಿದೆ. ಗ್ಯಾಸ್ ಇಲ್ಲದೆ ಬಾಡಿಗೆ ಸಿಗುತ್ತಿಲ್ಲ, ಬಾಡಿಗೆ ಇಲ್ಲದೆ ಇನ್ಶೂರೆನ್ಸ್ ಕಟ್ಟಲು ಹಣವಿಲ್ಲ ಎಂಬ ಸ್ಥಿತಿಗೆ ಚಾಲಕರು ಬಂದು ತಲುಪಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋ ಬೆಂಗಳೂರಿನಲ್ಲಿ!
ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋಗಳನ್ನು ಬಳಸುವ ನಗರ ಬೆಂಗಳೂರು. ಆದರೆ ಕಳೆದ ಕೆಲವು ದಿನಗಳಿಂದ ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಕಿಲೋಮೀಟರ್ ಉದ್ದದ ಸಾಲು ಕಂಡುಬರುತ್ತಿದೆ. ಎಲ್‌ಪಿಜಿ ಸಿಗದೆ ಚಾಲಕರು ದಿನಪೂರ್ತಿ ಬಂಕ್‌ಗಳ ಮುಂದೆಯೇ ಕಳೆಯುವಂತಾಗಿದ್ದು, ಸರಿಯಾದ ಬಾಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಆರ್ಥಿಕ ಸಂಕಷ್ಟದ ಸರಪಳಿ ಈಗ ಇನ್ಶೂರೆನ್ಸ್ ಕಂಪನಿಗಳಿಗೂ ತಟ್ಟಿದೆ.

ಲ್ಯಾಪ್ಸ್ ಆಗುತ್ತಿದೆ ಇನ್ಶೂರೆನ್ಸ್
ಸಾಮಾನ್ಯವಾಗಿ ಪ್ರತಿ ತಿಂಗಳು ಸಾವಿರಾರು ಆಟೋ ಚಾಲಕರು ತಮ್ಮ ವಾಹನದ ವಿಮೆಯನ್ನು ನವೀಕರಿಸುತ್ತಿದ್ದರು (Renew). ಆದರೆ ಈಗ ಬಾಡಿಗೆ ಇಲ್ಲದೆ ತಿನ್ನಲು ಹಣವಿಲ್ಲದಂತಾಗಿದ್ದು, ಇನ್ಶೂರೆನ್ಸ್ ಕಟ್ಟಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ವಿಮಾ ಏಜೆಂಟರು ಕರೆ ಮಾಡಿದರೆ, ‘ಊಟಕ್ಕೇ ದುಡ್ಡಿಲ್ಲ, ಇನ್ಶೂರೆನ್ಸ್ ಎಲ್ಲಿಂದ ಕಟ್ಟೋದು?’ ಎಂಬ ಉತ್ತರ ಚಾಲಕರಿಂದ ಬರುತ್ತಿದೆ. ಇದರಿಂದಾಗಿ ವಿಮಾ ಕಂಪನಿಗಳಿಗೆ ಮತ್ತು ಏಜೆಂಟ್‌ಗಳಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸಾವಿರಾರು ಆಟೋಗಳ ಇನ್ಶೂರೆನ್ಸ್ ಈಗ ಲ್ಯಾಪ್ಸ್ ಆಗುತ್ತಿದೆ ಎಂದು ಮೇಘನಾ ಇಂಟರ್ನ್ಯಾಷನಲ್ ಮಾಲೀಕ ವಸಂತ್ ರಾಜ್ ಅಳಲು ತೋಡಿಕೊಂಡಿದ್ದಾರೆ.

ಜೀವಕ್ಕೂ ಅಪಾಯ
ದುಡ್ಡಿದ್ದರೆ ಇನ್ಶೂರೆನ್ಸ್, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿಗೆ ಆಟೋ ಚಾಲಕರು ಬಂದಿದ್ದಾರೆ. ಆದರೆ ಇನ್ಶೂರೆನ್ಸ್ ಇಲ್ಲದೆ ಆಟೋ ಓಡಿಸುವಾಗ ಸಣ್ಣ ಪುಟ್ಟ ಅಪಘಾತಗಳಾದರೂ ಅದರ ಸಂಪೂರ್ಣ ಹೊಣೆಯನ್ನು ಚಾಲಕರೇ ಹೊರಬೇಕಾಗುತ್ತದೆ. ವಿಮೆಯ ಯಾವುದೇ ಸೌಲಭ್ಯಗಳು ಅವರಿಗೆ ದೊರೆಯುವುದಿಲ್ಲ. ಎಲ್‌ಪಿಜಿ ಸಮಸ್ಯೆಯಿಂದಾಗಿ ಚಾಲಕರು ತಮ್ಮ ಜೀವನಕ್ಕೆ ಮಾತ್ರವಲ್ಲದೆ, ಜೀವಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Share This Article