Ad image

ಕಟ್ಟಡ ನಿರ್ಮಾಣಕ್ಕೆ ಇರುವ ಕೆಲ ನಿಯಮಗಳನ್ನು ಕೈ ಬಿಡುವಂತೆ ಪಟ್ಟು; ಜಿಬಿಎಗೆ ಪತ್ರ!

Team SanjeMugilu
2 Min Read

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ರೂಪುಗೊಂಡ ಸಮಯದಲ್ಲೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಆಗುತ್ತಿವೆ. ಇದು ಸ್ವಾಗತಾರ್ಹ. ಈ ಬದಲಾವಣೆಗಳ ಮೂಲ ಉದ್ದೇಶ ಅಗಲವಾಗಿ ವಿಸ್ತರಿಸುವುದರ ಜೊತೆಗೆ ಎತ್ತರವಾಗಿಯೂ ಬೆಳವಣಿಗೆಗೆ ಅವಕಾಶ ನೀಡಬೇಕು ಎನ್ನುವುದು. ಕಟ್ಟಡ ನಿರ್ಮಾಣಕ್ಕೆ ಇರುವ ಪ್ರಮುಖ ನಿಯಮಗಳು ಸುತ್ತಲೂ ಬಿಡಬೇಕಾದ ಖಾಲಿ ಜಾಗ, ಕಟ್ಟಡದ ಎತ್ತರ, ನಿವಾಸಗಳ ಸಂಖ್ಯೆ ಹಾಗೂ ಅಂತಸ್ತಿನ ವಿಸ್ತೀರ್ಣದ ಅನುಪಾತಕ್ಕೆ ವಿಧಿಸಿರುವ ಮಿತಿಗಳಾಗಿವೆ.

ಹೊಸ ನಿಯಮಗಳು ಏನಿದೆ?
ಒಂದು 40 X 60ರ ನಿವೇಶನದ ವಿಸ್ತೀರ್ಣ 2400 ಚ.ಅಡಿಗಳು. ಇದರಲ್ಲಿ ಪಾರ್ಕಿಂಗ್ ಬಿಟ್ಟು ನಾಲ್ಕು ಮಹಡಿ ಕಟ್ಟಲು ಅನುಮತಿ ನೀಡುತ್ತಿದ್ದಾರೆ. 6 ಮನೆಗಳಿಗೆ ಅವಕಾಶವಿದೆ. (ಅಷ್ಟು ಅಡುಗೆಮನೆಗಳು ಇರಬಹುದು) ಹೊಸ ನಿಯಮದ ಪ್ರಕಾರ ಕಟ್ಟಡದ ಎತ್ತರ ಸ್ಟಿಲ್ಟ್ ಎತ್ತರ ಬಿಟ್ಟು 39.3 ಅಡಿ ದಾಟುವಂತಿಲ್ಲ. ಮಹಡಿಗಳ ಸಂಖ್ಯೆ ಹೆಚ್ಚಿಸುವಂತಿಲ್ಲ. ಸುತ್ತಲೂ ಬಿಡಬೇಕಾದ ಖಾಲಿ ಜಾಗದ ವಿಸ್ತೀರ್ಣ 520 ಚ.ಅಡಿಗಳು. ಅಂದರೆ ಉಳಿದ ಜಾಗ 1880 ಚ,ಅ. ಈ ಕಟ್ಟಡಕ್ಕೆ ಇರುವ ಎಫ್ಎಆರ್ ಮಿತಿ 1.75. ಅಂದರೆ 4200 ಚ.ಅ. ಆದರೆ ಎಫ್ಎಆರ್ ಮಿತಿಯ ಕಾರಣದಿಂದಾಗಿ ಲಭ್ಯವಿರುವ 1880 ಚ.ಅಡಿಯಲ್ಲಿ ಕೇವಲ 1050 ಅಡಿ ವಿಸ್ತೀರ್ಣದ ಮನೆ ಕಟ್ಟಬಹುದು.

ಪ್ರತಿ ಅಂತಸ್ತಿನಲ್ಲಿನ ಲಿಫ್ಟ್ ಹಾಗೂ ಮೆಟ್ಟಿಲುಗಳ ವಿಸ್ತೀರ್ಣ 200 ಚ.ಅ. ಇದರ ಅರ್ಥ ನಿಮ್ಮಲ್ಲಿ ಎಲ್ಲಾ ಸೆಟ್ ಬ್ಯಾಕ್, ಕಟ್ಟಡದ ಎತ್ತರ, ಅಡುಗೆಮನೆಗಳ ಸಂಖ್ಯೆ ಹಾಗೂ ಅಂತಸ್ತುಗಳ ಸಂಖ್ಯೆಯ ಮಿತಿಯೊಳಗೇ ಇದ್ದರೂ ಪ್ರತಿ ಅಂತಸ್ತಿನಲ್ಲಿ ಆಕಾಶಕ್ಕೆ ತೆರೆದುಕೊಂಡ ಖಾಲಿ ಜಾಗ 830 ಚ.ಅ.ಗಳಷ್ಟು.
ಎಫ್ಎಆರ್ ಮಿತಿಯ ನಿಯಮ ಇರುವುದು ಕಟ್ಟಡದಲ್ಲಿನ ಜನದಟ್ಟಣೆ ತಡೆಯಲು. ಯಾವುದೋ ಲೆಕ್ಕಾಚಾರದಲ್ಲಿ ಇಷ್ಟು ವಿಸ್ತೀರ್ಣದ ಮನೆಯಲ್ಲಿ ಇಷ್ಟು ಮಂದಿ ವಾಸಿಸುತ್ತಾರೆ ಎಂದು ತೀರ್ಮಾನ ಮಾಡಲಾಗಿದೆ ವಾಸ್ತವದಲ್ಲಿ ಎಫ್ಎಆರ್‌ಗೆ ವಿಧಿಸಿರುವ ಮಿತಿಯು ಮಾಡುತ್ತಿರುವುದೇನೆಂದರೆ, ತಲಾವಾರು ವಾಸಸ್ಥಳದ ವಿಸ್ತೀರ್ಣವನ್ನು ಕಡಿಮೆ ಮಾಡುವ ಕೆಲಸ ಮಾತ್ರ. ಒಂದು ಕಟ್ಟಡದಲ್ಲಿನ ಜನದಟ್ಟಣೆ ಅಲ್ಲಿ ಎಷ್ಟು ಜನರು ಇದ್ದಾರೆಂಬುದೇ ಆಗಿದ್ದರೂ, ಇದನ್ನು ಅಳೆಯುವ ಸೂಕ್ತ ಸಾಧನವೆಂದರೆ ಅದು ಎಷ್ಟು ಕುಟುಂಬಗಳು ಅಲ್ಲಿ ವಾಸಿಸುತ್ತಿವೆ ಎನ್ನುವುದಾಗಿದೆ.

ಒಮ್ಮೆ ಸುತ್ತ ಬಿಡಬೇಕಾದ ಜಾಗ, ಅಡುಗೆ ಮನೆಗಳ ಸಂಖ್ಯೆ, ಅಂತಸ್ತುಗಳ ಸಂಖ್ಯೆ, ಎತ್ತರದ ಮಿತಿಯನ್ನು ಗೊತ್ತು ಪಡಿಸಿದ ಮೇಲೆ ಎಫ್ಎಆರ್ ಎನ್ನುವ ಅವೈಜ್ಞಾನಿಕ ಮಾನದಂಡವನ್ನು ಇನ್ನೂ ಇಟ್ಟುಕೊಂಡರೆ, ಕಟ್ಟಡ ಕಟ್ಟುವವರಿಗೆ ಯಾವ ಅನುಕೂಲವೂ ಆಗದು. ಈಗ ನೀಡಲಾಗಿರುವ 15% ವ್ಯತ್ಯಯದ ಮಿತಿಗೂ ಅರ್ಥವಿಲ್ಲದಂತಾಗುತ್ತದೆ.
ಸರ್ಕಾರ, ಜಿಬಿಎ ಹಾಗೂ ನಗರ ಯೋಜನಾ ಇಲಾಖೆಗಳು ಈ ದಿಕ್ಕಿನಲ್ಲಿ ಆಲೋಚಿಸಿ ಕೂಡಲೇ ಎಫ್ಎಆರ್ ಮಾನದಂಡವನ್ನು ಕೈಬಿಡುವುದು ಸೂಕ್ತ. ಇದರಿಂದಾಗಿ ಸ್ವಂತ ಮನೆಯ ಕನಸು ಕಾಣುತ್ತಾ ಬಲು ಶ್ರಮದಿಂದ ಹಗಲಿರುಳು ದುಡಿದ ದುಡಿಮೆಯನ್ನು ಬಳಸಿಕೊಂಡು ನ್ಯಾಯಯುತವಾಗಿ ಮನೆ ಕಟ್ಟಿಕೊಳ್ಳುವ ಎಲ್ಲಾ ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗುವುದಕ್ಕಿಂತ ಅನನುಕೂಲವೇ ಹೆಚ್ಚಾಗುತ್ತದೆ.

Share This Article