ನವದೆಹಲಿ: ಬಿಹಾರದಲ್ಲಿ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ನಲ್ಲಿ ಹೊಸ ಅಫಿಡವಿಟ್ ಸಲ್ಲಿಸಿದ್ದು, ಪೂರ್ವ ಸೂಚನೆ ಮತ್ತು ಆದೇಶವಿಲ್ಲದೆ ಯಾರ ಹೆಸರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕುವುದಿಲ್ಲ ಎಂದು ಭರವಸೆ ನೀಡಿದೆ.
ಆಗಸ್ಟ್ 1ರಂದು ಎಸ್‌ಐಆರ್ ಅಡಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಅಳಿಸಲಾದ ಸುಮಾರು 65 ಲಕ್ಷ ಹೆಸರುಗಳ ವೈಯಕ್ತಿಕ ವಿವರಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶನ ನೀಡುವಂತೆ ಕೋರಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ ಅರ್ಜಿಗೆ ಇಸಿಐ ಪ್ರತಿಕ್ರಿಯಿಸಿದೆ.
ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. 2025 ರ ಬಿಹಾರ ವಿಧಾನಸಭೆಯ ಎಲ್ಲಾ 243 ಕ್ಷೇತ್ರಗಳಿಗೆ ಚುನಾವಣೆ ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.
ಭಾರತೀಯ ಚುನಾವಣಾ ಆಯೋಗ ಆಗಸ್ಟ್ 1 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಮೊದಲ ಹಂತವನ್ನು ಪೂರ್ಣಗೊಳಿಸಿದೆ. ವಿವಿಧ ಕಾರಣಗಳಿಗಾಗಿ 65 ಲಕ್ಷ ಹೆಸರುಗಳನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬಿಹಾರದ 7.89 ಕೋಟಿ ಮತದಾರರಲ್ಲಿ 7.24 ಕೋಟಿ ಮತದಾರರು ಈ ಅಭಿಯಾನದ ಸಮಯದಲ್ಲಿ ತಮ್ಮ ಫಾರ್ಮ್ಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಕಾರ್ಯಕ್ರಮದಲ್ಲಿ 77,000 ಕ್ಕೂ ಹೆಚ್ಚು ಬಿಎಲ್‌ಒಗಳು, 2.45 ಲಕ್ಷ ಸ್ವಯಂಸೇವಕರು ಮತ್ತು 1.6 ಲಕ್ಷ ಪಕ್ಷ ನೇಮಿಸಿದ ಬೂತ್ ಮಟ್ಟದ ಏಜೆಂಟ್‌ಗಳು ಭಾಗವಹಿಸಿದ್ದರು. ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಇತರ ದುರ್ಬಲ ಮತದಾರರಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಮಾಧ್ಯಮಗಳ ಮೂಲಕ ತಿಳಿಸಲಾದ ಯಾವುದೇ ಸಮಸ್ಯೆಯನ್ನು ಜಿಲ್ಲಾ ಅಧಿಕಾರಿಗಳು ತಕ್ಷಣವೇ ಪರಿಹರಿಸುತ್ತಾರೆ ಎಂದು ಅದು ಹೇಳಿದೆ.