Ad image

ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳ ನೇಣಿಗೆ ಶರಣಾದ ಗೃಹಿಣಿ

Team SanjeMugilu
1 Min Read

ಬೆಂಗಳೂರು: ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ನಡೆದಿದೆ.

ಪೂಜಶ್ರೀ(28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಈಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ವರ್ಷದ ಹಿಂದೆ ಮನೆಯವರ ನಿಶ್ಚಯದಂತೆ ಪೂಜಾಶ್ರೀ ಮತ್ತು ನಂದೀಶ್ ಮದುವೆಯಾಗಿದ್ದು ಹೆಣ್ಣು ಮಗುವಿದೆ. ದಂಪತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಒಂದು ವರ್ಷದ ನಂತರ ನಂದೀಶ್‌ಗೆ ಅಕ್ರಮ ಸಂಬAಧ ಇರುವ ವಿಚಾರ ಪೂಜಾಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಪ್ರಶ್ನೆ ಮಾಡಿದ್ದಕ್ಕೆ ನಂದೀಶ್ ನಿಮ್ಮ ತಾಯಿ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳಿ ಜಗಳವಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಎರಡು ಮೂರು ಬಾರಿ ಹಿರಿಯರ ಸಮ್ಮುಖದಲ್ಲಿ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ನಡೆದಿತ್ತು. ಈ ವೇಳೆ ನಾನು ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ನಂದೀಶ್ ಭರವಸೆ ನೀಡಿದ್ದ.

ಮೂರು ದಿನಗಳ ಹಿಂದೆ ಇದೇ ರೀತಿ ಜಗಳ ಮಾಡಿ ನಂದೀಶ್ ಹಲ್ಲೆ ಮಾಡಿದ್ದ. ಪತಿಯ ಕಿರುಕುಳ ತಾಳಲಾರದೇ ಪೂಜಾಶ್ರೀ ತವರು ಮನೆಗೆ ಬಂದಿದ್ದರು. ಈ ವಿಚಾರ ತಿಳಿದು ನಂದೀಶ್ ಅತ್ತೆ ಮನೆಗೆ ಬಂದು ಕಥೆ ಕಟ್ಟಿ ಮತ್ತೆ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಭಾನುವಾರ ಬೆಳಗ್ಗೆ ಪೂಜಶ್ರೀ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article