ಬೆಂಗಳೂರು: ಸಿಲಿಕಾನ್ ಸಿಟಿಯ ಮಾನ, ರಸ್ತೆ ಗುಂಡಿಗಳಲ್ಲಿ ಹರಾಜು ಆಗ್ತಿದೆ. ನಿತ್ಯ ಗುಂಡಿಗಳಿಂದ ವಾಹನ ಸವಾರರು ನರಕ ಅನುಭವಿಸ್ತಿದ್ದಾರೆ. ಅದೇ ರೀತಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ರಸ್ತೆ ಗುಂಡಿ ಸಮಸ್ಯೆ ಇದೆ. ಸರ್ಕಾರ ಅಭಿವೃದ್ಧಿ ಕಾರ್ಯ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಬೆಂಗಳೂರು ನಗರದ ಬಸವನಗುಡಿ, ಗೋವಿಂದರಾಜನಗರ, ವಿಜಯನಗರ, ಬಿಟಿಎಂ ಲೇಔಟ್ ಕ್ಷೇತ್ರಗಳಲ್ಲಿ ರಸ್ತೆ ತಡೆ ನಡೆಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿದಿನ 1 ಗಂಟೆ ರಸ್ತೆ ತಡೆ ನಡೆಸಿ ಅಥವಾ ಗುಂಡಿ ಬಿದ್ದಿರೋ ಜಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಇದರೊಂದಿಗೆ ತಾವೇ ಗುಂಡಿ ಮುಚ್ಚುವ ಕೆಲಸವನ್ನೂ ಮಾಡುತ್ತಿದ್ದಾರೆ.
224 ಕ್ಷೇತ್ರಗಳಲ್ಲಿ ಪ್ರತಿಭಟನೆ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾಯಾ ಸ್ಥಳೀಯ ನಾಯಕರ ನೇತೃತ್ವದಲ್ಲಿ ರಸ್ತೆ ರೋಕೋ (ರಸ್ತೆ ತಡೆ) ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ.ಬೆಂಗಳೂರು ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ರಸ್ತೆಗುಂಡಿ ಸಂಬಂಧ ಶಾಸಕ ಗೋಪಾಲಯ್ಯ ನೇತೃತ್ವದಲ್ಲಿ ಸಂಚಾರ ತಡೆ ಚಳವಳಿ ನಡೆಸಲಾಗುತ್ತಿದೆ. ಕಠೀರವ ಸ್ಟುಡಿಯೋ ಬಳಿ ರಸ್ತೆ ತಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಠೀರವ ಸ್ಟುಡಿಯೋ ರಸ್ತೆ, ಸುಮ್ಮನಹಳ್ಳಿ, ನಾಗರಭಾವಿ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆಗಳು ಗುಂಡಿಮಯವಾಗಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ʻಗುಂಡಿ ಮುಚ್ಚಿ ಜನರ ಪ್ರಾಣ ಉಳಿಸಿ, ಗುಂಡಿಗಳ ಊರು ಮಾಡಿದ ಕಾಂಗ್ರೆಸ್ ಸರ್ಕಾರʼ ಅಂತ ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ಗುಂಡಿಗಳ ಮುಂದೆ ಕುಳಿಯು ಬಾಯಿ ಬಾಯಿ ಬಡಿದುಕೊಳ್ಳುತ್ತಿರುವ ಪ್ರತಿಭಟನಾಕಾರರು, ತಾವೇ ಗುಂಡಿ ಮುಚ್ಚುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಾಜಿ ಶಾಸಕ ನೇಲ ನರೇಂದ್ರ ಬಾಬು, ಉಪ ಮೇಯರ್ ಹರೀಶ್ ಸಹ ಗುಂಡಿ ಮುಚ್ಚುವ ಕೆಲಸದಲ್ಲಿ ತೊಡಗಿದ್ದಾರೆ.