ನಾಳೆ ಮೈಸೂರಲ್ಲಿ ಅಂತ್ಯಕ್ರಿಯೆ
ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪನವರ ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1 ಗಂಟೆ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ರವಾನೆ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪಾರ್ಥೀವ ಶರೀರ ಮೈಸೂರು ತಲುಪಲಿದೆ. ಬಳಿಕ ಮೈಸೂರು ಕಲಾಮಂದಿರದ ಮುಂಭಾಗ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ 6 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಳಿಕ ಕೋಲ್ಡ್ ಸ್ಟೋರೆಜ್‌ನಲ್ಲಿ ಇಡಲಾಗುತ್ತೆ. ಸೆ.26ರಂದು ಶುಕ್ರವಾರ ಬೆಳಗ್ಗೆ ಕುವೆಂಪುನಗರದಲ್ಲಿರುವ ಭೈರಪ್ಪ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗುತ್ತದೆ. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಸದ್ಯ ಭೈರಪ್ಪ ಅವರ ಪುತ್ರ ರವಿಶಂಕರ್ ಲಂಡನ್ ನಿಂದ ಆಗಮಿಸುತ್ತಿದ್ದಾರೆ.
`ಸರಸ್ವತಿ’ ಪುತ್ರ ಎಸ್.ಎಲ್ ಭೈರಪ್ಪ ಅಸ್ತಂಗತ
ಈ ದೇಶಕಂಡ ಖ್ಯಾತ ಕಾದಂಬರಿಕಾರ, ಸರಸ್ವತಿ ಸನ್ಮಾನ್ ಪ್ರಶಸ್ತಿ ವಿಜೇತ ಕನ್ನಡ ಸಾಹಿತ್ಯ ಲೋಕದ ಪರ್ವ ಡಾ.ಎಸ್.ಎಲ್ ಭೈರಪ್ಪನವರ ಯುಗಾಂತ್ಯವಾಗಿದೆ. ತಮ್ಮ ಕಾದಂಬರಿಗಳಿಂದಲೇ ಮನೆಮನಗಳಲ್ಲಿ ಅಚ್ಚಳಿಯದೇ ಉಳಿದಿದ್ದ ಚೈತನ್ಯದ ಚಿಲುಮೆ ಡಾ. ಎಸ್ ಎಲ್ ಭೈರಪ್ಪನವರು ಬಾರದ ಲೋಕಕ್ಕೆ ತೆರಳಿದ್ದಾರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೈರಪ್ಪನವರು ನಿನ್ನೆ ವಿಧಿವಶರಾಗಿದ್ದಾರೆ, 94 ವರ್ಷದ ಡಾ.ಎಸ್.ಎಲ್ ಭೈರಪ್ಪನವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ನಿನ್ನೆ ಮಧ್ಯಾಹ್ನ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕನ್ನಡ ನಾಡೇ ಕಂಬನಿ ಇಟ್ಟಿದೆ, ಇವರ ಸಾವಿನಿಂದ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ವಂಶವೃಕ್ಷದಿಂದ ನಾಯಿನೆರಳು ವರೆಗೂ ಸಿನಿಮಾ
ಇನ್ನು.., ಸಾರಸತ್ವ ಲೋಕದ ದಿಗ್ಗಜನ ಅಗಲಿಕೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಖ್ಯಾತ ಕಾದಂಬರಿಕಾರ ಇನ್ನಿಲ್ಲ ಎಂಬ ಸುದ್ದಿ ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ಬರಸಿಡಿಲು ಬಂಡಿದಂತಾಗಿದೆ, ಪ್ರಸಿದ್ಧ ಕಾದಂಬರಿಕಾರ, ತತ್ವಜ್ಞಾನಿಯಾಗಿದ್ದ ಎಸ್‌ಎಲ್ ಭೈರಪ್ಪ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಅವರ ರಚಿಸಿದ ಬಹುತೇಕ ಕಾದಂಬರಿಗಳು ಕನ್ನಡ ಸಿನಿಮಾ ರಂಗದಲ್ಲಿ ಮಿಂಚಿ ಅಚ್ಚಳಿಯದೇ ಉಳಿದುಕೊಂಡಿದೆ, 1971 ರಲ್ಲಿ ತೆರೆ ಕಂಡ ವಂಶವೃಕ್ಷ ಸಿನಿಮಾ ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತವಾಗಿದ್ದಿದ್ದು. ಈ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಅಭಿನಯಿಸಿ ಮಿಂಚಿದ್ದರು. ನಂತ್ರ ತಬ್ಬಲಿಯು ನೀನಾದೆ ಮಗನೆ, ಮತದಾನ, ನಾಯಿನೆರಳು, ಕೃತಿಗಳು ಸಿನಿಮಾವಾದರೆ, ಗೃಹಭಂಗ ಮತ್ತು ದಾಟು ಕಾದಂಬರಿ ಆಧಾರಿತವಾದ ಟಿವಿ ಸೀರಿಯಲ್ ಆಗಿ ನಿರ್ಮಾಣ ಗೊಂಡಿದ್ದವು, ಹೀಗಾಗಿ ಎಸ್‌ಎಲ್ ಭೈರಪ್ಪನವರ ಕೃತಿಗಳು ತೆರೆಯ ಮೇಲೂ ರಾರಾಜಿಸಿದ್ದವು.