ಬೆಂಗಳೂರು: ಜಿಎಸ್‌ಟಿ ಕಡಿತದಿಂದ ಖುಷಿ ಖುಷಿಯಾಗಿದ್ದ ರಾಜ್ಯದ ಜನರಿಗೆ ಶಾಕ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ಯಾ ಎಂಬ ಚರ್ಚೆ ಶುರುವಾಗಿದೆ. ಕಾರಣ ಥಿಯೇಟರ್, ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ಮೇಲಿನ ಸೆಸ್ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಒಂದೆಡೆ ಸಿನಿಮಾ ಟಿಕೆಟ್‌ಗೆ 200 ರೂಪಾಯಿ ವಿಧಿಸಿ ಸರ್ಕಾರ ಆದೇಶ ಮಾಡಿತ್ತು. ಆದರೆ ಅದನ್ನು ವಿರೋಧಿಸಿ ಹೊಂಬಾಳೆ ಸೇರಿದಂತೆ ಕೆಲ ಸಿನಿಮಾ ತಯಾರಕ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಸದ್ಯ ಸರ್ಕಾರದ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ. ಇದರ ಬೆನ್ನಲ್ಲೇ ಇತ್ತ ಸಿನಿಮಾ ಟಿಕೆಟ್‌ಗೆ ಶೇಕಡಾ 2ರಷ್ಟು ಸೆಸ್ ವಿಧಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡಾ 2ರಷ್ಟು ಸೆಸ್?
ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಸಿನಿಮಾ ಥಿಯೇಟರ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳ ಮೇಲೆ ಸೆಸ್ ವಿಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿನಿಮಾ ಟಿಕೆಟ್‌ಗಳು ಮತ್ತು ಟೆಲಿವಿಷನ್ ಮನರಂಜನಾ ವಾಹಿನಿಗಳ ವೀಕ್ಷಣೆಯ ಮೇಲೆ ಶೇ. 2ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಈ ಕುರಿತಂತೆ ಕರಡು ಪ್ರತಿ ಸಿದ್ಧವಾಗಿದ್ದು, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕಲ್ಯಾಣ) ಕಾಯ್ದೆ, 2024 ರ ಅಡಿಯಲ್ಲಿ ಕರಡು ನಿಯಮಗಳನ್ನು ರೂಪಿಸಲಾಗಿದೆ. ಈ ಸೆಸ್ ಶೀಘ್ರವೇ ಜಾರಿಗೆ ಬರೋ ಸಾಧ್ಯತೆ ಇದೆ.
ಕಲಾವಿದರ ಕಲ್ಯಾಣ ನಿಧಿಗೆ ಬಳಕೆ
ಈ ಸೆಸ್‌ನಿಂದ ಬರುವ ಹಣವನ್ನು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ಕಾಯ್ದೆಯಡಿ ಬಳಸಿಕೊಳ್ಳಲಾಗುತ್ತದೆ. ಸಿನಿಮಾ ಕಲಾವಿದರು, ತಂತ್ರಜ್ಞರ ಕಲ್ಯಾಣ ನಿಧಿಗೆ ಹಣ ಇದನ್ನು ನೀಡಲಾಗುತ್ತದೆ. ನೋಂದಾಯಿತ ಸಿನಿಮಾ ಕಾರ್ಮಿಕರಿಗೆ ಅಪಘಾತ ವಿಮೆ, ಪಿಂಚಣಿ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ. ಕುಂದುಕೊರತೆ ನಿವಾರಣೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆಯಾಗಲಿದೆ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಸಿನಿಮಾ ಟಿಕೆಟ್‌ಗಳ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲು ನಿರ್ಧರಿಸಲಾಗಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದೂರದರ್ಶನ ಮನರಂಜನಾ ಚಾನೆಲ್‌ಗಳ ಒಟ್ಟು ವಹಿವಾಟಿನ ಮೇಲೆ ಶೇಕಡಾ 2ರಷ್ಟು ಸೆಸ್ ವಿಧಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಸಿನಿಮಾ ಟಿಕೆಟ್ ಬೆಲೆ 200 ರೂಪಾಯಿ ನಿಗದಿ ಮಾಡಿದ್ದ ಸರ್ಕಾರ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ಟಿಕೆಟ್ ಬೆಲೆ 200 ರೂಪಾಯಿ ಮಾಡಿ ಸರ್ಕಾರ ಆದೇಶ ನೀಡಿತ್ತು. ಮಲ್ಟಿಫ್ಲೆಕ್ಸ್, ಸಿನಿಮಾ ಥಿಯೇಟರ್ ಸೇರಿದಂತೆ ಎಲ್ಲೆಡೆ ಒಂದೇ ದರ ವಿಧಿಸಿ ಆದೇಶಿಸಿತ್ತು. ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ರಾಜ್ಯದಲ್ಲಿ ಸಿನಿಮಾಗಳಿಗೆ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ಈ ಹಿಂದೆ ಭಾರೀ ಆಗ್ರಹ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿ ಆದೇಶಿಸಿತ್ತು.
ಸರ್ಕಾರದ ಆದೇಶಕ್ಕೆ ತಡೆ ನೀಡಿರುವ ಕೋರ್ಟ್
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೊಂಬಾಳೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ನ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ವಿಚಾರಣೆ ಮುಂದೂಡಿತ್ತು.