ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನ ಮನೆಯ ಸುತ್ತಲೂ ನಿಯೋಜಿಸಲಾಗಿದೆ. ಕಾಲ್ತುಳಿತದಲ್ಲಿ ಸಾವು ನೋವು ಸಂಭವಿಸಿದ ಹಿನ್ನೆಲೆ ಶನಿವಾರ ಮಧ್ಯರಾತ್ರಿಯಿಂದಲೇ ವಿಜಯ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಬೆದರಿಕೆ ಬಂದ ಹಿನ್ನೆಲೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳಗಳಿಂದ ಮನೆಯ ಸುತ್ತಲೂ ಹಾಗೂ ಮನೆಯ ಒಳಾಂಗಣವನ್ನ ಪರಿಶೀಲನೆ ಮಾಡಲಾಗಿದೆ.
ತಮಿಳುನಾಡು ರಾಜಕೀಯ ಪ್ರವೇಶಿಸಿರುವ ನಟ ದಳಪತಿ ವಿಜಯ್ ಕರೂರು ಜಿಲ್ಲಾ ಕೇಂದ್ರದ 2 ಕಿ.ಮೀ. ದೂರದ ವೇಲುಸ್ವಾಮಿಪುರಂನ ಹೆದ್ದಾರಿಯಲ್ಲಿ ಚುನಾವಣಾ ರ‍್ಯಾಲಿ ಹಮ್ಮಿಕೊಂಡಿದ್ದರು. ಶನಿವಾರ ರಾತ್ರಿ 7:15 ಸುಮಾರಿಗೆ ಏಕಾಏಕಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಪೈಕಿ 2 ವರ್ಷದ ಮಗು ಸೇರಿ 10 ಮಕ್ಕಳು, 17 ಮಹಿಳೆಯರೂ ಸೇರಿದ್ದಾರೆ. ಮೃತ 28 ಜನ ಕರೂರು ಜಿಲ್ಲೆಯವರಾಗಿದ್ದರೆ ಉಳಿದವರು ಈರೋಡ್, ತಿರುಪುರ, ಧಾರಾಪುರಂ, ಸೇಲಂ ಜಿಲ್ಲೆಯವರಾಗಿದ್ದಾರೆ.
ಕರೂರು ಕಾಲ್ತುಳಿದಲ್ಲಿ ಗಾಯಾಗಳುಗಳ ಸಂಖ್ಯೆ 150ಕ್ಕೆ ಏರಿದೆ. ಕರೂರು, ತಿರುಚ್ಚಿ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ದುರ್ಘಟನೆ ಹಿನ್ನೆಲೆಯಲ್ಲಿ ಇಡೀ ಕರೂರು ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ವರ್ತಕರೇ ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು. ಕಾಲ್ತುಳಿತ ಘಟನಾ ಸ್ಥಳವಾದ ಹೆದ್ದಾರಿಯಲ್ಲಿ ಚಪ್ಪಲಿ-ಶೂಗಳ ರಾಶಿ, ಹರಿದ ಬಟ್ಟೆಗಳು, ಮುರಿದು ಹೋಗಿರುವ ಮರದ ಕಂಬಗಳು, ನಜ್ಜುಗುಜ್ಜಾಗಿರುವ ನೀರಿನ ಬಾಟೆಲ್‌ಗಳ ರಾಶಿಯೇ ಕಂಡು ಬಂದಿತ್ತು.
ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ
ಕರೂರು ವಿಜಯ್ ರ‍್ಯಾಲಿಯಲ್ಲಿ ಸಾವನ್ನಪ್ಪಿದ್ದವರದ್ದು ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕಥೆ. ನೆಚ್ಚಿನ ನಟನ ನೋಡಲು ಪತ್ನಿ ಕಣ್ಮರೆಯಾಗಿದೆ ಅಂತ ಇಡೀ ಕುಟುಂಬ ರಾತ್ರಿಯೆಲ್ಲಾ ಹುಡುಕಾಡಿದೆ. ಆದರೆ, ಬೆಳಗ್ಗೆ ಜಿಲ್ಲಾಡಳಿತದಿಂದ ಕರೆ ಬಂದಿತ್ತು. ಆತಂಕದಲ್ಲಿ ಹೋಗಿ ನೋಡಿದಾಗ ನನ್ನ ಹೆಂಡತಿ ಹೆಣವಾಗಿದ್ದಳು ಅಂತ ಕೈಮೇಲಿನ ಅಚ್ಚೆ ನೋಡಿ ಪತಿ ಗುರುತಿಸಿದ್ದಾರೆ. ಅಂದಹಾಗೆ, ದಂಪತಿಗೆ ಒಂದು ವರ್ಷದ ಮಗು ಇದ್ದು ತಾಯಿಯನ್ನು ಕಳೆದುಕೊಂಡಿದೆ. ಆಸ್ಪತ್ರೆ ಮುಂದೆ ತಮ್ಮವರ ಕಳೆದುಕೊಂಡ ಕುಟುಂಬಸ್ಥರು ಎದೆ ಬಡಿದುಕೊಂಡು ಗೋಳಾಡ್ತಿರೋದನ್ನು ನೋಡಿದ್ರೆ ಕರುಳು ಚುರ್ ಅನ್ನಿಸುತ್ತೆ. ಈ ಮಧ್ಯೆ, ಆಪ್ತರನ್ನು ಕಳೆದುಕೊಂಡ ಕುಟುಂಬವೊಂದು ವಿಜಯ್ ನಾಶವಾಗಿ ಹೋಗ್ತಾನೆ ಅಂತ ಹಿಡಿಶಾಪ ಹಾಕಿದೆ.