ಲಂಡನ್: ಗಾಂಧಿ ಜಯಂತಿಗೂ ಮುನ್ನವೇ ಲಂಡನ್ನಲ್ಲಿ ಕೃತ್ಯವೊಂದು ನಡೆದಿದೆ. ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿ, ಅದರ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು ವಿಕೃತಿ ಮರೆದಿದ್ದಾರೆ.
ಸೋಮವಾರ (ಸೆ.29) ಲಂಡನ್ ವಿಶ್ವವಿದ್ಯಾಲಯದ ಟ್ಯಾವಿಸ್ಟಾಕ್ ಸ್ಕ್ವೇರ್ನಲ್ಲಿ ಧ್ಯಾನಸ್ಥ ಭಂಗಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ವಿಕೃತಿ ಮರೆದಿದ್ದಾರೆ. ಪ್ರತಿಮೆಯ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳು ಕಂಡುಬಂದಿದೆ. ಈ ಕೃತ್ಯವನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದ್ದು, ಪ್ರತಿಮೆಯ ಮೂಲ ಘನತೆಗಾಗಿ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಕುರಿತು ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಎಂದು ತಿಳಿಸಿದೆ.
ಈ ಕುರಿತು ಭಾರತೀಯ ಹೈಕಮಿಷನ್ ಹೇಳಿಕೆ ಬಿಡುಗಡೆ ಮಾಡಿದ್ದು, ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ನಾಚಿಕೆಗೇಡಿನ ಸಂಗತಿ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಗೊತ್ತುಪಡಿಸಲಾದ ಮೂರು ದಿನಗಳ ಮೊದಲು ನಡೆದ ಹಿಂಸಾತ್ಮಕ ದಾಳಿಯಿದು ಎಂದು ತಿಳಿಸಿದೆ.ಸದ್ಯ ಈ ಕೃತ್ಯದ ವರದಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮತ್ತು ಸ್ಥಳೀಯ ಕ್ಯಾಮ್ಡೆನ್ ಕೌನ್ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾತ್ಮ ಗಾಂಧಿಯವರು ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು. ಅದರ ಗೌರವಾರ್ಥವಾಗಿ 1968ರಲ್ಲಿ ಇಂಡಿಯಾ ಲೀಗ್ನ ಬೆಂಬಲದೊಂದಿಗೆ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.