Ad image

750 ಕೆಜಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು, ವಿರಾಜಮಾನಳಾದ ಚಾಮುಂಡೇಶ್ವರಿ

Team SanjeMugilu
2 Min Read

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರ ಬಿಂದು ಜಂಬೂ ಸವಾರಿ ಇದೀಗ ಪ್ರಾರಂಭವಾಗಿದೆ. ಬರೋಬ್ಬರಿ 750 ಕೆಜಿ ಚಿನ್ನದ ಅಂಬಾರಿ  ಹೊತ್ತ ಅಭಿಮನ್ಯು ಗಜಗಾಂಭಿರ್ಯದ ನಡಿಗೆ ಮೂಲಕ ಜಂಬೂ ಸವಾರಿ ಪ್ರಾರಂಭಿಸಿದ್ದಾನೆ. ಚಿನ್ನದ ಅಂಬಾರಿ ಮೇಲೆ ನಾಡದೇವಿ ಚಾಮುಂಡೇಶ್ವರಿ  ವಿರಾಜಮಾನಳಾಗಿದ್ದಾಳೆ. ಕೇಸರಿ ಸೀರೆಯಲ್ಲಿ, ಸರ್ವಾಲಂಕಾರ ಭೂಷಿತಳಾದ ಚಾಮುಂಡೇಶ್ವರಿ, ವಿಧ ವಿಧದ ಹೂವುಗಳನ್ನು ಮುಡಿದು, ಕಂಗೊಳಿಸುತ್ತಿದ್ಧಾಳೆ. ಸಿಎಂ ಸಿದ್ದರಾಮಯ್ಯ  ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ್ದಾರೆ. ದಾರಿಯುದ್ಧಕ್ಕೂ ನೆರೆದ ಅಸಂಖ್ಯಾತ ಭಕ್ತರು ಚಿನ್ನದ ಅಂಬಾರಿ ಸಮೇತ ಚಾಮುಂಡೇಶ್ವರಿಯನ್ನು ನೋಡಿ ಕಣ್ತುಂಬಿಕೊಂಡರು.
ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಚಾಲನೆ
ಇಂದು ಮಧ್ಯಾಹ್ನ 1ರಿಂದ 1.18ರ ಶುಭ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಸಿಎಂ ಸಿದ್ದರಾಮಯ್ಯ ನಂದಿ ಪೂಜೆ ನಡೆಸಿದ್ರು. ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಮೆರವಣಿಗೆಗೆ ಚಾಲನೆ‌ ನೀಡಿದ್ರು. ಇದೀಗ ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06 ವರೆಗಿನ ಶುಭ ಮುಹೂರ್ತದಲ್ಲಿ ಜಂಬೂ ಸವಾರಿಗೆ ಚಾಲನೆ ನೀಡಲಾಯ್ತು.
750 ಕೆಜಿ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು
ಅಭಿಮನ್ಯು ಆನೆ ಬರೋಬ್ಬರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದೆ. 2002ರಿಂದ ಮೈಸೂರು ದಸರಾದಲ್ಲಿ ಅಭಿಮನ್ಯು ಅಂಬಾರಿಯನ್ನು ಹೊರುತ್ತಾ ಬಂದಿದ್ದಾನೆ. ಇದೀಗ 6ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಸಮೇತ, ಚಾಮುಂಡೇಶ್ವರಿಯನ್ನು ಹೊತ್ತು ಸಾಗಿದ್ದಾನೆ.
ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮೂಲಕ ವಿಶ್ವವಿಖ್ಯಾತ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ನೀಡಿದ್ರು. ಚಿನ್ನದ ಅಂಬಾರಿಯೊಳಗಿರುವ ಚಾಮುಂಡೇಶ್ವರಿ ಚಿನ್ನದ ಮೂರ್ತಿಗೆ ಸಿಎಂ ಪುಷ್ಪಾರ್ಚನೆ ಮಾಡಿದ್ರು. ಈ ಮೂಲಕ ಜಂಬೂ ಸವಾರಿಗೆ ಅಧಿಕೃತ ಚಾಲನೆ ಸಿಕ್ಕಿದೆ.
ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡ ಅಸಂಖ್ಯಾತ ಭಕ್ತರು
ಪ್ರತಿ ವರ್ಷ 9 ದಿನ ನವರಾತ್ರಿ ನಡೆದು, 10ನೇ ದಿನ ವಿಜಯ ದಶಮಿ ನಡೆಯುತ್ತಿತ್ತು, ಆ ದಿನ ಐತಿಹಾಸಿಕ ಜಂಬೂ ಸವಾರಿ ನಡೆಯುತ್ತಿತ್ತು. ಆದರೆ ಈ ಬಾರಿ 11 ದಿನ ದಸರಾ ನಡೆಯುತ್ತಿದೆ. ಇಂದು 11ನೇ ದಿನವಾಗಿದ್ದು, ಇಂದು ಜಂಬೂ ಸವಾರಿ ಮೂಲಕ ವಿಶ್ವವಿಖ್ಯಾತ ಅದ್ಧೂರಿ ಮೈಸೂರು ದಸರಾಗೆ ವಿದ್ಯುಕ್ತ ತೆರೆ ಬೀಳಲಿದೆ. ಈ ಬಾರಿ ಚಾಮುಂಡೇಶ್ವರಿ ಕೇಸರಿ ಸೀರೆಯುಟ್ಟು ಕಂಗೊಳಿಸುತ್ತಿದ್ದು, ಸರ್ವಾಲಂಕಾರಭೂಷಿತೆಯಾಗಿದ್ದಾಳೆ. ಅಭಿಮನ್ಯು ಬೆನ್ನ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತ ನಾಡದೇವಿಯನ್ನು ನೋಡಿ ಅಸಂಖ್ಯಾತ ಭಕ್ತರು ಕಣ್ತುಂಬಿಕೊಂಡರು.
ಅಂಬಾರಿ ಹೊತ್ತು 5 ಕಿಲೋ ಮೀಟರ್ ಮೆರವಣಿಗೆ
ಅಭಿಮನ್ಯು ಆನೆಯು ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು 5 ಕಿಲೋ ಮೀಟರ್ ಸಾಗಲಿದ್ದಾನೆ. ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್​ ನೀಡುವ ಮೂಲಕ ಮೆರವಣಿಗೆಯನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು ಸುಳ್ಳಲ್ಲ.
ಕ್ಯಾಪ್ಟನ್ ಅಭಿಮನ್ಯುಗೆ ಇತರೇ ಆನೆಗಳ ಸಾಥ್
ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯುಗೆ ನಿಶಾನೆ ಆನೆಗಳು, ನೌಪತ್ ಹಾಗೂ ಸಾಲಾನೆಗಳು ಸಾಥ್ ನೀಡಿದ್ದವು. ಜೊತೆಗೆ 100ಕ್ಕೂ ಹೆಚ್ಚು ಕಲಾ ತಂಡಗಳು, 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಮೆರವಣಿಗೆಯುದ್ದಕ್ಕೂ ಸಾಗುತ್ತಿವೆ.

Share This Article