ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋಗಾಗಿ ಮನೆ ನಿರ್ಮಿಸಿ, ಚಿತ್ರೀಕರಣ ಮಾಡಲಾಗುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಅನ್ನು ನಿನ್ನೆ ಅಧಿಕಾರಿಗಳು ಬಂದ್ ಮಾಡಿಸಿದ್ದರು. ಮಾಲಿನ್ಯಕ್ಕೆ ಸಂಬಂಧಿಸಿದ ಕೆಲ ನಿಯಮಗಳನ್ನು ಸ್ಟುಡಿಯೋ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಈ ನಿರ್ಣಯ ಕೈಗೊಳ್ಳಲಾಗಿತ್ತು. ಇದರಿಂದಾಗಿ ಬಿಗ್ಬಾಸ್ ಶೋ ಸಹ ಬಂದ್ ಆಗಿತ್ತು. ಸ್ಪರ್ಧಿಗಳನ್ನೆಲ್ಲ ಸ್ಥಳಾಂತರ ಮಾಡಲಾಗಿತ್ತು. ಇದೀಗ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.
ಇಂದಷ್ಟೆ, ಜಾಲಿವುಡ್ ಸ್ಟುಡಿಯೋಸ್ನ ಮಾತೃ ಸಂಸ್ಥೆ ವೆಲ್ಸ್ ಸ್ಟುಡಿಯೋಸ್ನವರು ತಮ್ಮ ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಸ್ಟುಡಿಯೋನಲ್ಲಿ ಇರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಹದಿನೈದು ದಿನಗಳ ಕಾಲಾವಕಾಶ ನೀಡಿರೆಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ವೆಲ್ಸ್ ಸ್ಟುಡಿಯೋದ ಮನವಿಯನ್ನು ಮನ್ನಿಸಿರು ಜಿಲ್ಲಾಧಿಕಾರಿಗಳು ಹತ್ತು ದಿನಗಳ ಕಾಲಾವಕಾಶವನ್ನು ಸ್ಟುಡಿಯೋಗೆ ನೀಡಿದ್ದಾರೆ.
ಇದೀಗ ಹತ್ತು ದಿನಗಳ ಕಾಲಾವಕಾಶ ಸಿಕ್ಕಿರುವ ಬೆನ್ನಲ್ಲೆ ಬಿಗ್ಬಾಸ್ ಶೋ ಮತ್ತೆ ಪ್ರಾರಂಭ ಆಗುವ ಸಾಧ್ಯತೆ ಇದೆ. ಅಸಲಿಗೆ ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವ ಘಟನೆಯಲ್ಲಿ ಬಿಗ್ಬಾಸ್ ಶೋನ ಪಾತ್ರ ಏನೂ ಇರಲಿಲ್ಲ. ಆದರೆ ಸ್ಟುಡಿಯೋಕ್ಕೆ ಬೀಗ ಹಾಕಿದ ಕಾರಣಕ್ಕೆ ಬಿಗ್ಬಾಸ್ ಶೋಗೆ ಸಹ ಪೆಟ್ಟಾಗಿತ್ತು. ಇದೀಗ 10 ದಿನ ಕಾಲಾವಕಾಶ ನೀಡಿರುವ ಕಾರಣಕ್ಕೆ ಇಂದೇ ಬಿಗ್ಬಾಸ್ ಶೋ ಮತ್ತೆ ಪ್ರಾರಂಭ ಆಗುವ ಸಾಧ್ಯತೆ ಇದೆ.
ಇಂದೇ ಮತ್ತೆ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕರೆದುಕೊಂಡು ಬರುತ್ತಾರೆಯೋ ಅಥವಾ 10 ದಿನಗಳ ಗಡುವು ಮುಗಿದು, ಎಲ್ಲ ಒಪ್ಪಿಗೆಗಳು ದೊರೆತ ಬಳಿಕ ಬಿಗ್ಬಾಸ್ ಅನ್ನು ಮತ್ತೆ ಪ್ರಾರಂಭ ಮಾಡುತ್ತಾರೆಯೋ ಎಂಬುದು ಖಾತ್ರಿ ಇಲ್ಲ. ಕೆಲವೇ ಹೊತ್ತಿನಲ್ಲಿ ಈ ಬಗ್ಗೆ ಖಚಿತ ಮಾಹಿತಿ ಲಭ್ಯ ಆಗಲಿದೆ. ಇಂದು ರಾತ್ರಿ ಅಂತೂ ಬಿಗ್ಬಾಸ್ ಎಂದಿನಂತೆ ಪ್ರಸಾರ ಆಗಲಿದೆ. ಈಗಾಗಲೇ ಶೋನ ಪ್ರೋಮೊಗಳು ಸಹ ಬಿಡುಗಡೆ ಆಗಿವೆ. ನಾಳೆಯ ಎಪಿಸೋಡ್ಗೂ ಕಂಟೆಂಟ್ ರೆಡಿ ಇದೆ ಎನ್ನಲಾಗುತ್ತಿದೆ. ಒಂದೊಮ್ಮೆ ಇಂದೇ ಸ್ಪರ್ಧಿಗಳು ಮನೆಗೆ ವಾಪಸ್ಸಾದರೆ ಯಾವುದೇ ಬ್ರೇಕ್ ಇಲ್ಲದೆ ಎಪಿಸೋಡ್ಗಳು ಪ್ರಸಾರ ಆಗಲಿವೆ.