Ad image

ಜಾತಿಗಣತಿಗೆ ಹೋದ ಶಿಕ್ಷಕಿಯನ್ನೇ ಕೂಡಿ ಹಾಕಿದ ವ್ಯಕ್ತಿ!

Team SanjeMugilu
1 Min Read

ಬೆಂಗಳೂರು: ಜಾತಿಗಣತಿಗೆ ಹೋದ ಶಿಕ್ಷಕಿಯನ್ನೇ ವ್ಯಕ್ತಿಯೊಬ್ಬ ಕೂಡಿ ಹಾಕಿದ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೋತಿ ಹೊಸಹಳ್ಳಿಯಲ್ಲಿ ನಡೆದಿದೆ.

ಬುಧವಾರ ಸಂಜೆ ಶಿಕ್ಷಕಿ ಸುಶೀಲಮ್ಮ ಅವರು ಸಂದೀಪ್‌ ಅವರ ಮನೆಗೆ ಆಗಮಿಸಿ, ನಾವು ಗಣತಿಗೆ ಬಂದಿದ್ದೇವೆ. ಆಧಾರ್‌ ಕಾರ್ಡ್ ಕೊಡಿ ಎಂದು ಕೇಳಿದ್ದರು. ಇದಕ್ಕೆ ಮನೆಯಲ್ಲಿದ್ದವರು, ನೀವು ಯಾವ ಕಂಪನಿಯವರು ಇಲ್ಲಿಗೆ ಏಕೆ ಬಂದಿದ್ದೀರಾ? ನೀವು ನಿಜವಾಗಿಯೂ ಟೀಚರ್ ಅಲ್ಲ ಎಂದು ಗಲಾಟೆ ಮಾಡಿದ್ದಾರೆ.

ಕೊನೆಗೆ ಶಿಕ್ಷಕಿಯ ತಾಯಿಯ ಬಳಿಕ ಆಧಾರ್‌ಕಾರ್ಡ್, ವೋಟರ್ ಕಾರ್ಡ್ ನಂಬರ್ ಪಡೆದಿದ್ದರು. ಈ ಹೊತ್ತಿಗೆ ಟೀ ಶಾಪ್ ನಡೆಸುವ ಸಂದೀಪ್ ಮನೆಗೆ ಬಂದಿದ್ದಾನೆ. ಬಂದವನೇ ಜಗಳ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾನೆ.

ಸುಶೀಲಮ್ಮ ನಾನು ಶಿಕ್ಷಕಿ ಎಂದು ಹೇಳಿದರೂ ಕೇಳದೇ ಸಂದೀಪ್‌ ಮನೆ ಕೂಡಿಹಾಕಿದ್ದ. ಕೊನೆಗೆ ಭಯಗೊಂಡ ಸುಶೀಲಮ್ಮ ಪೊಲೀಸ್ ಕಂಟ್ರೋಲ್ ರೂಮ್ 112ಗೆ ಕರೆ ಮಾಡಿ ದೂರು ನೀಡಿದ್ದರು. ಕರೆಯ ಬೆನ್ನಲ್ಲೇ ಸಂದೀಪ್‌ ಮನೆಗೆ ತೆರಳಿ ಸುಶೀಲಮ್ಮ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಸಂದೀಪ್ ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article