Ad image

ಅ. 13ಕ್ಕೆ ಔತಣಕೂಟ ಹಿನ್ನೆಲೆ ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ

Team SanjeMugilu
2 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 13ಕ್ಕೆ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಅಪರೂಪಕ್ಕೆ ಕರೆದಿರುವ ಈ ಔತಣಕೂಟ ಕೆಲ ಸಚಿವರ ಪಾಲಿಗೆ ಬೀಳ್ಗೊಡುಗೆ ಆಗಬಹುದು ಎಂಬ ಚರ್ಚೆ ಕಾಂಗ್ರೆಸ್‌ನಲ್ಲೇ  ಜೋರಾಗಿ ನಡೆಯುತ್ತಿದೆ. ಯಾರ ಕುರ್ಚಿ ಉಳಿಯುತ್ತದೆ, ಯಾರ ಕುರ್ಚಿ ಹೋಗುತ್ತದೆ ಎಂಬ ಪ್ರಶ್ನೆ ಮೂಡಿದೆ. ಹಿರಿತಲೆಯ ನಾಯಕರೇ ನವೆಂಬರ್​ನಲ್ಲಿ ನಡೆಯಲಿರುವ ಸಂಪುಟ ಪುನಾರಚನೆಯಿಂದ ಸೈಡಿಗೆ ಸರಿಯಬೇಕಾಗಬಹುದು ಎಂಬುದು ಕಾಂಗ್ರೆಸ್​ನಲ್ಲಿ ಹರಡಿರುವ ವದಂತಿ. ಆದರೆ ಸಂಪುಟ ವಿಸ್ತರಣೆ ಅಥವಾ ನಾಯಕತ್ವ ಬದಲಾವಣೆ ಎಂಬ ಜೇನುಗೂಡಿಗೆ ಹೈಕಮಾಂಡ್ ಕೈ ಹಾಕಿದ್ದೇ ಆದರೆ ಅಲ್ಲೋಲ ಕಲ್ಲೋಲ ಗ್ಯಾರಂಟಿ. ಇದರ ಮುನ್ಸೂಚನೆ ಮನಗಂಡಿರುವ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿಯೇ ಕೂತು ಭಾರೀ ತಂತ್ರಗಾರಿಕೆ ಮಾಡುತ್ತಿದ್ದಾರೆ.

ಸುಮಾರು 2 ಗಂಟೆ ಕಾಲ ಅತ್ಯಾಪ್ತ ಸಚಿವರ ಜತೆ ಸಭೆ!
ಇನ್ನೊಂದು ದಿನ ಕಳೆದರೆ ಸಿದ್ದರಾಮಯ್ಯ ಕರೆದ ಡಿನ್ನರ್ ಸಭೆ ನಡೆಯಲಿದೆ. ಇದಕ್ಕೆ ಮೊದಲೇ ಸಿಎಂ ಸಿದ್ದರಾಮಯ್ಯ ತಮ್ಮ ಅತ್ಯಾಪ್ತ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕೀಯದ ಕ್ಷಿಪ್ರ ಬೆಳವಣಿಗೆ ಸಾಧ್ಯಾಸಾಧ್ಯತೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ರಾಜಕೀಯದಲ್ಲಿ 2+2 ಯಾವತ್ತೂ ನಾಲ್ಕೂ ಎನ್ನಲಾಗುವುದಿಲ್ಲ. 2+2 ಸೇರಿಸಿದರೆ ಐದೂ ಆಗಬಹುದು. ಅಂಥ ಬದಲಾದ ಸನ್ನಿವೇಶಗಳಿಗೆ ಪ್ರತಿತಂತ್ರಗಾರಿಕೆ ಬಗ್ಗೆಯೂ ಗಂಭೀರ ಮಾತುಕತೆ ಕಾವೇರಿಯಲ್ಲಿ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ಈ ಸಭೆ ನಡೆದಿದೆ..

ಆಪ್ತ ಸಚಿವರ ಸಭೆಯಲ್ಲಿ ಏನೇನು ಸಮಾಲೋಚನೆ?
ನಾಯಕತ್ವ ಬದಲಾವಣೆ ವಿಷಯ ಬಂದರೆ ಅದಕ್ಕೆ ಹೇಗೆ ಕೌಂಟರ್ ಮಾಡಬೇಕು ಎಂಬ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಸಿದ್ದರಾಮ್ಯಯ್ಯರೇ ಸರ್ಕಾರವನ್ನ ಮುಂದುವರಿಸುವ ಬಗ್ಗೆ ಹಾಗೂ ಕ್ಷಿಪ್ರ ಬೆಳವಣಿಗೆಗಳಾದ್ರೆ ಸಿದ್ದರಾಮಯ್ಯ ರಹಿತ ಸರ್ಕಾರ ಆದರೆ ಹೇಗೆ ಎಂಬ ಬಗ್ಗೆ ವಿಶ್ಲೇಷಿಸಿದ್ದಾರೆ. ಹಾಗೇ ರಾಜಕೀಯ ಎದುರಾಳಿಗಳ ಗಡುವಿಗೆ ಪ್ರತಿತಂತ್ರ ಹೆಣೆಯುವ ವಿಷಯ ಕೂಡ ಗಂಭೀರವಾಗಿ ಚರ್ಚೆಯಾಗಿದೆ. ಈ ಸಂಬಂಧ ಮುಂದಿರುವ ಎಲ್ಲಾ ಆಯ್ಕೆಗಳನ್ನ ಮುಕ್ತವಾಗಿಟ್ಟುಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಮಂತ್ರಿ ಮತ್ತು ಶಾಸಕರ ನಿರ್ವಹಣೆ ವಿಚಾರ ಸಹ ಸಚಿವರು ಪ್ರಸ್ತಾಪಿಸಿದ್ದಾರೆ. ಜೊತೆಗೆ ಸಂಪುಟ ವಿಸ್ತರಣೆ ಲಾಭ ನಷ್ಟದ ಬಗ್ಗೆ ಸಹ ಮಾತುಕತೆ ನಡೆದಿದೆ.

ಈಗಾಗ್ಲೇ ಪಕ್ಷದಲ್ಲಿ ಬೇಸರಗೊಂಡಿರುವ ಮಂತ್ರಿ ಹಾಗೂ ಶಾಸಕರನ್ನ ಸೆಳೆಯುವ ಬಗ್ಗೆ ಚರ್ಚೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಸಂಪುಟ ವಿಸ್ತರಣೆ ನೆಪದಲ್ಲಿ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ತಂತ್ರ ಹೆಣೆದಂತೆ ಕಾಣುತ್ತಿದೆ. ಇದೇ ಈಗ ಹೊಸದೊಂದು ಚರ್ಚೆಗೆ ಕಾರಣವಾಗಿದೆ.

Share This Article