ಬೆಂಗಳೂರು: ಬೆಂಗಳೂರಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಜನರ ಆರೋಗ್ಯಕ್ಕೆ ಕುತ್ತು ತರುವ ಸೂಚನೆ ನೀಡುತ್ತಿದೆ. ಈ ಮಧ್ಯೆ ಇಷ್ಟು ಹದಗೆಟ್ಟ ವಾತಾವರಣಕ್ಕೆ ಕಾರಣವೇನೆಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಕೇವಲ ವಾಹನದಿಂದ ಉತ್ಪತ್ತಿಯಾಗುವ ಕಲುಷಿತ ಹೊಗೆ, ಧೂಳಿನ ಕಣಗಳು ಮಾತ್ರವಲ್ಲದೇ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚದ ಜಿಬಿಎ ನಡೆ ಕೂಡ ರಾಜಧಾನಿಯ ವಾಯುಮಾಲಿನ್ಯ ಹೆಚ್ಚಳ ಮಾಡುತ್ತಿರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬಿಚ್ಚಿಟ್ಟಿದೆ. ಗುಂಡಿಗಳಿಂದ ವಾತಾವರಣಕ್ಕೆ ಧೂಳಿನ ಕಣಗಳು ಸೇರಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಮಂಡಳಿ ಆರೋಪ ಮಾಡುತ್ತಿದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ರಸ್ತೆಗುಂಡಿಗಳೂ ಕಾರಣ
ಸದ್ಯ ಬೆಂಗಳೂರಿನಲ್ಲಿ ವಾಹನದಟ್ಟಣೆ ಜೊತೆಗೆ ಲೇ ಔಟ್ ಗಳ ನಿರ್ಮಾಣಕ್ಕೆ ಮರಗಳನ್ನು ಕಡಿಯುತ್ತಿರುವುದು ಹಾಗೂ ರಸ್ತೆಗುಂಡಿಗಳಿಂದ ಬರುತ್ತಿರುವ ಧೂಳಿನ ಕಣಗಳು ವಾಯುಮಾಲಿನ್ಯ ಏರಿಕೆಗೆ ಕಾರಣವಾಗುತ್ತಿದೆ. ರಸ್ತೆ ಗುಂಡಿಗಳಿಂದ ಎದುರಾಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಗುಂಡಿಗಳನ್ನು ಮುಚ್ಚಲು ಎಷ್ಟೇ ಗಡುವು ಕೊಟ್ಟರೂ ಕೆಲಸ ಮುಗಿಯುವಲ್ಲಿ ವಿಳಂಬವಾಗುತ್ತಲೇ ಇದೆ. ಇದರಿಂದಾಗಿ ಧೂಳಿನ ಕಣಗಳು ವಾತಾವರಣ ಸೇರಿ ಗಾಳಿಯನ್ನು ಕಲುಷಿತಗೊಳಿಸುತ್ತಿರುವುದು ವಾಯುಮಾಲಿನ್ಯ ಇನ್ನಷ್ಟು ಹೆಚ್ಚುತ್ತಿದೆ. ಸದ್ಯ ರಾಜಧಾನಿಯ ರಸ್ತೆಗಳಲ್ಲಿ ಉತ್ಪತ್ತಿಯಾಗುತ್ತಿರುವ ಧೂಳಿನ ಕಣಗಳ ಪರ್ಟಿಕ್ಯುಲೇಟ್ ಮ್ಯಾಟರ್ ನಿಯಂತ್ರಣದಲ್ಲೂ ಎಡವಿರುವುದು ಮಾಲಿನ್ಯ ಹೆಚ್ಚಳಕ್ಕೆ ಮತ್ತೊಂದು ರೀತಿಯ ಸಂಕಷ್ಟ ತಂದಿಟ್ಟಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಾಲಿನ್ಯ
ಬೆಂಗಳೂರಲ್ಲಿ ಮಿತಿಮೀರಿದ ವಾಹನಗಳ ದಟ್ಟಣೆ ಜೊತೆಗೆ ವಾಹನಗಳ ಸಂಚಾರ ವೇಳೆ ಬಿಡುಗಡೆಯಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ವಾತಾವರಣ ಸೇರಿ ವಾಯುಗುಣಮಟ್ಟ ಕುಸಿತವಾಗುತ್ತಿರುವುದು ಬೆಂಗಳೂರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸದ್ಯ ವಾಯುಗುಣಮಟ್ಟದಲ್ಲಿ 2024ರಲ್ಲಿ 28ನೇ ಸ್ಥಾನ ಪಡೆದಿದ್ದ ಬೆಂಗಳೂರು ಇದೀಗ ಈ ವರ್ಷದ ಸ್ವಚ್ಚ ಸರ್ವೇಕ್ಷಣ್ನಲ್ಲಿ 36ನೇ ಸ್ಥಾನಕ್ಕೆ ಕುಸಿದಿರುವುದು ರಾಜಧಾನಿಯ ವಾತಾವರಣ ಎಷ್ಟರಮಟ್ಟಿಗೆ ಕಲುಷಿತ ಆಗುತ್ತಿದೆ ಎನ್ನುವುದನ್ನು ಅನಾವರಣ ಮಾಡಿದೆ. ಇತ್ತ ಹದಗೆಟ್ಟ ವಾತಾವರಣದಿಂದ ಬೆಂಗಳೂರು ನಿವಾಸಿಗಳ ಜೀವಿತಾವಧಿ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಆಯಸ್ಸಿನ 2 ವರ್ಷ ಕಡಿಮೆಯಾಗಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಸದ್ಯ ಬೆಂಗಳೂರಲ್ಲಿ ಪ್ರತಿದಿನ ಸುಮಾರು 1 ಕೋಟಿಗೂ ಹೆಚ್ಚು ವಾಹನಗಳು ಸಂಚಾರ ನಡೆಸುತ್ತವೆ. ರಸ್ತೆ ಅಗಲೀಕರಣ, ರಸ್ತೆ ಗುಂಡಿಗಳ ಮುಚ್ಚುವಿಕೆಯ ಕಾಮಗಾರಿಯೂ ನಡೆಯುತ್ತಿವೆ. ದೀಪಾವಳಿ ಹಬ್ಬ ಕೂಡ ಹತ್ತಿರವಾಗುತ್ತಿದ್ದು , ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದರಿಂದ ಮತ್ತಷ್ಟು ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಇವೆಲ್ಲದರಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ.