ಬೆಂಗಳೂರು: ಪವರ್ ಶೇರಿಂಗ್ ವಿಚಾರ ಮತ್ತು ಸಂಪುಟ ಪುನರಾಚನೆ ವಿಚಾರ ಯಾವುದೇ ಶಾಸಕರು, ಸಚಿವರು ಬಹಿರಂಗವಾಗಿ ಮಾತಾಡೋದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಪಕ್ಷದ ಶಾಸಕ, ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಒಳಗೆ ಪವರ್ ಶೇರಿಂಗ್ ಮತ್ತು ಸಚಿವ ಸಂಪುಟ ಪುನರಾಚನೆ ಬಗ್ಗೆ ಚರ್ಚೆ ಆಗ್ತಿರೋ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಶಾಸಕರು ಇದರ ಬಗ್ಗೆ ಮಾತಾಡಬಾರದು. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಯಾರು ಇದರ ಬಗ್ಗೆ ಮಾತಾಡಬಾರದು ಎಂದು ತಿಳಿಸಿದ್ದಾರೆ.
ಗೊಂದಲ ನಾವು ಸೃಷ್ಟಿ ಮಾಡಬಾರದು. ನಮಗೆ ಏನಾದ್ರು ಬೇಕಾದ್ರೆ ಹೈಕಮಾಂಡ್ ಹೇಳಬೇಕು. ಮಾಧ್ಯಮಗಳಿಗೆ ಹೇಳಬಾರದು. ಏನೇ ಇದ್ದರು ಹೈಕಮಾಂಡ್‌ಗೆ ಬಳಿ ಹೋಗಿ ಹೇಳಲಿ. ಯಾರನ್ನ ಮಂತ್ರಿ ಮಾಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾವ ಶಾಸಕರು, ಮಂತ್ರಿಗಳು ಬಹಿರಂಗವಾಗಿ ಮಾತಾಡೋದು ಸರಿಯಲ್ಲ ಎಂದಿದ್ದಾರೆ.
ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಪ್ರತಿ ವರ್ಷ ಊಟಕ್ಕೆ ಕರೆಯುತ್ತಾರೆ. ಬೇರೆ ವಿಷಯ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಅಂತ ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ ಒಳಗೆ ಕೇಂದ್ರದಲ್ಲಿ ಕ್ರಾಂತಿ ಆಗುತ್ತೆ
ನವೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತೆ. ಸಿಎಂ ಬದಲಾವಣೆ ಆಗುತ್ತೆ ಎಂಬ ಬಿಜೆಪಿ ಭವಿಷ್ಯಕ್ಕೆ ತಿರುಗೇಟು ನೀಡಿದ ಅವರು, ನಾನು ಹೇಳ್ತೀನಿ ಡಿಸೆಂಬರ್ ಒಳಗೆ ಕೇಂದ್ರದಲ್ಲಿ ಕ್ರಾಂತಿ ಆಗುತ್ತೆ. ನಿತಿನ್ ಗಡ್ಕರಿ ಪ್ರಧಾನಿ ಆಗ್ತಾರೆ. ಮೋದಿ ಬಗ್ಗೆ ಮಾತಾಡೋಕೆ ಮಾಧ್ಯಮಗಳಿಗೂ ಆಗ್ತಿಲ್ಲ. ಮೋದಿ ವಿರುದ್ಧ ಯಾರಿಗೂ ಮಾತಾಡೋ ಧೈರ್ಯ ಇಲ್ಲ. ಬಿಜೆಪಿ ಅವರು ಹುಲಿ ಸವಾರಿಯಲ್ಲಿ ಇದ್ದಾರೆ. ಮೋದಿ ಕೆಲಸವನ್ನು ಒತ್ತಾಯಪೂರ್ವಕವಾಗಿ ಒಪ್ಪುತ್ತಿದ್ದಾರೆ. ಮೋದಿ ಬಿಹಾರದಲ್ಲಿ 10,000 ರೂ. ಹಣ ಕೊಟ್ಟರು. ಇದನ್ನ ಬಿಜೆಪಿಯ ಯುವ ನಾಯಕರು ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಾರೆ.
10 ವರ್ಷದ ಹಿಂದೆ ಮೋದಿ ಅವರು ಟೆಂಡರ್ ಕೂಗಿದ್ರು. ಈಗ ಬಿಹಾರದಲ್ಲಿ 10,000 ಕೊಡ್ತೀನಿ ಅಂತ ಕೂಗುತ್ತಿದ್ದಾರೆ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ಯಾ? ಇವರು ಅಭಿವೃದ್ಧಿ ಮಾಡಿದ್ರೆ ಯಾಕೆ ಹಣ ಕೊಡಬೇಕಿತ್ತು. ಇದನ್ನ ಬಿಜೆಪಿ ನಾಯಕರಿಗೆ ಕೇಳ್ತಾರಾ? ಮಾಧ್ಯಮಗಳು ಕೇಳ್ತಾರಾ? ಕೇರಳ, ಬಿಹಾರಕ್ಕೆ ಹೋದ್ರೆ ಒಂದೊAದು ಸ್ಲೋಗನ್ ಕೊಡ್ತಾರೆ. ಇಂತಹ ಪ್ರಧಾನಿ ಯಾವತ್ತು ನಾವು ನೋಡಿಲ್ಲ ಎಂದು ಕಿಡಿಕಾರಿದರು.