Ad image

ಸಮೀಕ್ಷೆ ನಿರಾಕರಿಸಿದ ಸುಧಾಮೂರ್ತಿ ದಂಪತಿಗೆ ಸಿಎಂ ತಿರುಗೇಟು, ಬಿಕೆ ಹರಿಪ್ರಸಾದ್ ಕೂಡ ಕಿಡಿ

Team SanjeMugilu
2 Min Read

ಬೆಂಗಳೂರು : ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಯಲ್ಲಿ  ಭಾಗಿಯಾಗಲು ನಿರಾಕರಿಸಿದ ಎಂದ ಸುಧಾ ಮೂರ್ತಿ ದಂಪತಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಮೈಸೂರಲ್ಲಿ ಮಾತಾಡಿದ ಸಿಎಂ ಸಿದ್ದರಾಮಯ್ಯ, ನಾರಾಯಣ ಮೂರ್ತಿ ಅವರ ದಂಪತಿ ತಪ್ಪು ಮಾಹಿತಿ ಹೋಗಿರಬೇಕು ಎಂದ್ರು. ನಾನು, ಸಚಿವರು, ಶಾಸಕರು ಕೂಡ ಈ ಸ್ಪಷ್ಟನೆ ನೀಡಿದ್ದೇವೆ. ಸಮೀಕ್ಷೆಯಲ್ಲಿ ಮೇಲ್ಜಾತಿಯವರು ಭಾಗಿಯಾಗಲ್ಲ ಅನ್ನೋದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇವರನ್ನ ದೇಶದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ ಎಂದು ಬಿಕೆ ಹರಿಪ್ರಸಾದ್​  ಗುಡುಗಿದ್ದಾರೆ.
ಮಾಧ್ಯಮಗಳ ಜೊತೆ ಮಾತಾಡಿ ಬಿಕೆ ಹರಿಪ್ರಸಾದ್​ ಅವ್ರು, ಸಿಎಂ ಸಿದ್ದರಾಮಯ್ಯ ಧೈರ್ಯ ಮಾಡಿ ಈ ಒಂದು ಸಮೀಕ್ಷೆ ನಡೆಸುತ್ತಿದ್ದಾರೆ. ಆದ್ರೆ ಕೆಲವರು ಭಾಗಿಯಲ್ಲ ಅಂದಿದ್ದು ಸರಿಯಲ್ಲ ಎಂದು ಸುಧಾಮೂರ್ತಿ ದಂಪತಿ ವಿರುದ್ದ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

‘ದೇಶದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ’
ಮೇಲ್ಜಾತಿಯವರಿಗೆ ಹಿಂದುಳಿದ ಸಮೀಕ್ಷೆ ಬೇಕಾಗಿಲ್ಲ. ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂದ್ರೆ ಅವರನ್ನ ಸಂವಿಧಾನ ವಿರೋಧಿಗಳು, ದೇಶದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ. ಅವ್ರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು. ಸರ್ಕಾರದಿಂದ ಒಂದು ರೂಪಾಯಿಗೆ ಭೂಮಿ ಪಡೆದುಕೊಂಡಿರ್ತಾರೆ. ಸುಮಾರು 35 ಸಾವಿರ ಕೋಟಿ ತೆರಿಗೆ ಕಟ್ಟೋರಿದ್ದಾರೆ. ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಭಾಗಿಯಾಗ್ತಿಲ್ಲ ಎಂದು ಬಿ‌ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಪರೋಕ್ಷವಾಗಿ ಟ್ವೀಟ್​ ಮೂಲಕವೂ ಕಿಡಿ
ಶ್ರೀಮಂತಿಕೆಯನ್ನು ಸರಳತೆಯಲ್ಲಿ ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ಮುಚ್ಚಿಡುವುದು ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣ. ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ.
ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲುಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ.
ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ,ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ದಟತನದ ಪರಮಾವಧಿ. ಸರಳತೆ ಶ್ರೀಮಂತಿಕೆಯನ್ನ ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ ಎಂದು ಬರೆದಿದ್ದಾರೆ.
RSS ವಿರುದ್ದ ಬಿ‌ಕೆ ಹರಿಪ್ರಸಾದ್ ವಾಗ್ದಾಳಿ
ಆರ್​ಎಸ್​ಎಸ್​ ವಿರುದ್ಧವೂ ಕಿಡಿಕಾರಿದ ಬಿ‌ಕೆ ಹರಿಪ್ರಸಾದ್, ಫೋನ್ ಮಾಡಿ ಬೆದರಿಕೆ ಹಾಕೋರು ರಣಹೇಡಿಗಳು. ಕಲ್ಬುರ್ಗಿಯಲ್ಲಿ ಪಥಸಂಚಲನಕ್ಕೆ ಅನುಮತಿ ಕೊಡಬಾರದು. RSS ರಿಜಿಸ್ಟರ್ ಸಂಸ್ಥೆಯೇ ಅಲ್ಲ. ಅದರ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ದವೂ ಕ್ರಮ ಜರುಗಿಸಬೇಕು ಎಂದು ಪ್ರಿಯಾಂಕ ಖರ್ಗೆ ಅವರು ಹೇಳಿರೋದು ಸರಿಯಾಗಿದೆ ಎಂದಿದ್ದಾರೆ.
ಆರ್ ಎಸ್ ಎಸ್ ಇದ್ದಿಲು ಇದ್ದ ಹಾಗೆ, ಅಶೋಕ್ ಕಣ್ಣಿಗೆ ವಜ್ರದಂತೆ ಕಾಣಿಸುತ್ತದೆ. ದೊಣ್ಣೆ ಹಿಡಿದುಕೊಂಡು ಹೋಗೋರು ಭಯೋತ್ಪಾದರು. ಬೇಕಾದ್ರೆ ದೊಣ್ಣೆ ಹಿಡಿದುಕೊಂಡು ದನ ಕಾಯೋಕೆ ಹೋಗಲಿ. ಗಣವೇಷ ಅಲ್ಲ ಯಾವ್ ವೇಷ ಆದ್ರೂ ಹಾಕಿಕೊಳ್ಳಲಿ. RSS ನೊಂದಾಯಿತ ಸಂಸ್ಥೆ ಅಲ್ಲ.RSS ಒಂದು ಭೂಗತ ಸಂಘಟನೆ ಎಂದು ಬಿ ಕೆ ಹರಿ ಪ್ರಸಾದ್ ಹೇಳಿದ್ದಾರೆ.

Share This Article