ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ 5 ಗ್ಯಾರಂಟಿಗಳಲ್ಲಿ ಬಸ್ಗಳಲ್ಲಿ ಮಹಿಳೆಯರಿಗೆ ಫ್ರೀಯಾಗಿ ಓಡಾಡಲು ಅವಕಾಶ ನೀಡುವ ಶಕ್ತಿ ಯೋಜನೆ ಕೂಡ ಒಂದು. ಸಾರಿಗೆ ಸಿಬ್ಬಂದಿ ವಿವಿಧ ಬೇಡಿಕೆ ಇಟ್ಟುಕೊಂಡು ಆಗಾಗ ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ. ಆದ್ರೆ ಸರ್ಕಾರ ಮಾತ್ರ ಫ್ರೀ ಬಸ್ನಿಂದ ಸಾರಿಗೆ ಇಲಾಖೆಗೆ ಆದಾಯ ಹೆಚ್ಚಾಗಿದೆ ಎನ್ನುತ್ತಲೇ ಇದೆ. ಅಲ್ಲದೇ ಫ್ರೀ ಬಸ್ನಿಂದ ಕೆಲಸ ಮಾಡೋ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಅಂತ ಖುದ್ದು ಸಿಎಂ ಸಿದ್ದರಾಮಯ್ಯನವ್ರೇ ಹೇಳಿದ್ದಾರೆ.
ಶಕ್ತಿ ಯೋಜನೆ ಹಲವು ರೆಕಾರ್ಡ್ ಮಾಡಿದ್ಯಂತೆ. ಇತ್ತೀಚಿಗಷ್ಟೇ ಶಕ್ತಿ ಯೋಜನೆ ವಿಶ್ವಮಟ್ಟದಲ್ಲಿ ಪ್ರಶಂಸೆ ಗಳಿಸಿದೆ. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಶಕ್ತಿ ಯೋಜನೆ ಸ್ಥಾನ ಪಡೆದಿದೆ ಅಂತ ಸಿಎಂ ಸಿದ್ದರಾಮಯ್ಯನವ್ರೇ ಟ್ವೀಟ್ ಮಾಡಿ, ಸರ್ಟಿಫಿಕೇಟ್ ಹಂಚಿಕೊಂಡಿದ್ದರು. ಆದರೆ ಈ ಸರ್ಟಿಫಿಕೇಟೇ ನಕಲಿ ಎನ್ನಲಾಗಿದೆ. ಇದರಿಂದಾಗಿ ಸರ್ಕಾರ ನಗೆಪಾಟಲಿಗೀಡಾಗಿದ್ದು, ಇದೀಗ ಸಿಎಂ ಟ್ವೀಟ್ ಡಿಲೀಟ್ ಆಗಿದ್ದು, ಸಿಎಂ ವಿರುದ್ಧ ಬಿಜೆಪಿ, ಜೆಡಿಎಸ್ ವ್ಯಂಗ್ಯವಾಡಿದೆ.
ಫೇಕ್ ಸರ್ಟಿಫಿಕೇಟ್ ಶೇರ್ ಮಾಡಿದ್ರಾ ಸಿಎಂ?
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು “ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ತನ್ನ ಶಕ್ತಿ ಗ್ಯಾರಂಟಿ ಯೋಜನೆಯನ್ನು ಮೆಚ್ಚಿ ನೀಡಿದೆ ಎನ್ನಲಾದ ನಕಲಿ ಪ್ರಮಾಣಪತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ ನಗೆಪಾಟಲಿಗೀಡಾಗಿದೆ. ಈ ಸರ್ಟಿಫಿಕೇಟ್ ಬಗ್ಗೆ ಪರಿಶೀಲಿಸದೇ ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೇ ಶೇರ್ ಮಾಡಿದ್ದು, ಇದೀಗ ಮುಜುಗರಕ್ಕೆ ಕಾರಣವಾಗಿದೆ.
ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೌರವ ಎಂದಿದ್ದ ಸಿಎಂ
ಮೂರು ದಿನಗಳ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಸುಗಮಗೊಳಿಸುವ ತಮ್ಮ ಸರ್ಕಾರದ ‘ಶಕ್ತಿ’ ಯೋಜನೆಯನ್ನು ಮಹಿಳೆಯರು ಅತಿ ಹೆಚ್ಚು ಉಚಿತ ಬಸ್ ಪ್ರಯಾಣವನ್ನು ಪಡೆದಿದ್ದಕ್ಕಾಗಿ ‘ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಪ್ರಮಾಣೀಕರಿಸಿದೆ ಎಂದು ಹೇಳಿದ್ದರು. ಸರ್ಟಿಫಿಕೇಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.
ನೀವು ಎಷ್ಟು ಕೀಳುಮಟ್ಟಕ್ಕೆ ಹೋಗುತ್ತೀರಿ?
ಇದು ಫೇಕ್ ಸರ್ಟಿಫಿಕೇಟ್ ಅಂತ ಹೇಳಲಾಗ್ತಿದ್ದು, ಬಿಜೆಪಿ, ಜೆಡಿಎಸ್ ನಾಯಕರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಿಜೆಪಿ ಎಂಎಲ್ಸಿ ಮತ್ತು ಮಾಜಿ ಸಚಿವ ಸಿಟಿ ರವಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಮಾಣಪತ್ರ ನಕಲಿ ಮಾತ್ರವಲ್ಲ. ಅದರಲ್ಲಿ ದರಪಟ್ಟಿಯೂ ಇದೆ.! ಜನರನ್ನು ಮರುಳು ಮಾಡಲು ನೀವು ಎಷ್ಟು ಕೀಳುಮಟ್ಟಕ್ಕೆ ಹೋಗಿ ಇಷ್ಟೆಲ್ಲಾ ಅಗ್ಗದ ತಂತ್ರಗಳನ್ನು ತೋರಿಸಬಹುದು ಅಂತ ಟೀಕಿಸಿದ್ದಾರೆ.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
ಕಾಂಗ್ರೆಸ್ ಸರ್ಕಾರದ ಪೇಮೆಂಟ್ ಸರ್ಟಿಫಿಕೇಟ್! ಬಂಡವಾಳ ಬಯಲಾದ ಬಳಿಕ ಟ್ವೀಟ್ ಡಿಲೀಟ್! ಸಿದ್ದರಾಮಯ್ಯ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತ ಜೆಡಿಎಸ್ ಟ್ವೀಟ್ ಮಾಡಿದೆ. ಈ ಪ್ರಮಾಣಪತ್ರವು ಹಣಕ್ಕೆ ಸಿಗುತ್ತದೆ ಎಂದು ಈಗ ತಿಳಿದುಬಂದಿದೆ. ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಅನ್ನು ಜುಲೈ 15, 2025 ರಂದು ವಿಸರ್ಜಿಸಲಾಯಿತು ಎಂದು ಜೆಡಿಎಸ್ ಹೇಳಿಕೊಂಡಿದೆ.
ಇದು ಕಾಂಗ್ರೆಸ್ಗೆ ದೊಡ್ಡ ಮುಜುಗರ
“ಕಾಂಗ್ರೆಸ್ಗೆ ದೊಡ್ಡ ಮುಜುಗರ” ಎಂದು ಬಿಜೆಪಿ ಐಟಿ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯಾ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿನ್ನೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ರಾಜ್ಯ ಯೋಜನೆಗಳನ್ನು ಲಂಡನ್ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಲಂಡನ್ ಕಂಪನಿ ದೆಹಲಿಯಲ್ಲಿ ನಡೆಯುತ್ತಿದೆ
ಈ ಕಂಪನಿಯನ್ನು ಜುಲೈ 2025 ರಲ್ಲಿ ವಿಸರ್ಜಿಸಲಾಯಿತು, ಮತ್ತು ಪುಟವನ್ನು ಈಗ ದೆಹಲಿಯ ಪಹರ್ಗಂಜ್ನ ಚುನಾ ಮಂಡಿಯಿಂದ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಸರಿನಲ್ಲಿ ನಡೆಸಲಾಗುತ್ತಿದೆ ಎಂದು ತೋರುತ್ತದೆ. ಹಗರಣದೊಳಗೆ ಕಾಂಗ್ರೆಸ್ ಮಾತ್ರ ಈ ಮಟ್ಟದ ಹಗರಣಕ್ಕೆ ಬಲಿಯಾಗಬಹುದು ಅಂತ ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.