Ad image

ಪಥಸಂಚಲನದಲ್ಲಿ ಪಾಲ್ಗೊಂಡಿದ್ದ PDO ಸಸ್ಪೆಂಡ್ ವಿಚಾರ: ಪ್ರವೀಣ್​​ಗೆ ಧೈರ್ಯ ತುಂಬಿದ ತೇಜಸ್ವಿ ಸೂರ್ಯ

Team SanjeMugilu
1 Min Read

ರಾಯಚೂರು: ಸರ್ಕಾರ ಮೊದಲು ಸರ್ಕಾರಿ ಜಾಗಗಳಲ್ಲಿ ಆರ್​​ಎಸ್​ಎಸ್​  ಚಟುವಟಿಕೆಗಳಿಗೆ ಕಡಿವಾಣ ಹಾಕಿತು. ಬಳಿಕ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟಿದೆ. ಶುಕ್ರವಾರ ಆರ್​ಎಸ್​ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಪ್ರವೀಣ್ ಕುಮಾರ್​​ರನ್ನು ಅಮಾನತು ಮಾಡಲಾಗಿದೆ. ಸದ್ಯ ಅಮಾನತು ಆಗಿರುವ ಪ್ರವೀಣ್ ಕುಮಾರ್​ ಜೊತೆಗೆ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದು, ಆತ್ಮಸ್ತೈರ್ಯ ತುಂಬಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರು ಸಂಸದ ತೇಜಸ್ವಿ ಸೂರ್ಯ, ಶ್ರೀ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಅಮಾನತುಗೊಳಿಸಿದ ಅಧಿಕಾರಿ ಶ್ರೀ ಪ್ರವೀಣ್ ಕುಮಾರ್​ರೊಂದಿಗೆ ನಾನು ಮಾತನಾಡಿದ್ದು, ಈ ಕಾನೂನುಬಾಹಿರ ಮತ್ತು ಅಕ್ರಮ ಅಮಾನತನ್ನು ಪ್ರಶ್ನಿಸಲು ನಾನು ವೈಯಕ್ತಿಕವಾಗಿ ಸಂಬಂಧಪಟ್ಟ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ಮುಂದೆ ಹಾಜರಾಗುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ ಎಂದರು.

ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರ ಹಕ್ಕನ್ನು ಎತ್ತಿಹಿಡಿದಿರುವ ಅನೇಕ ಹೈಕೋರ್ಟ್‌ಗಳ ತೀರ್ಪುಗಳಿವೆ. ಈ ಅಕ್ರಮ ಅಮಾನತು ರದ್ದಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರವು ಕಾನೂನು ಹೋರಾಟ ಬಯಸಿದರೆ, ನಾವು ತಯಾರಾಗಿದ್ದೇವೆ ಎಂದಿದ್ದಾರೆ.

ಆರೆಸ್ಸೆಸ್​ ಶತಮಾನೋತ್ಸವ ಹಿನ್ನಲೆ ಅಕ್ಟೋಬರ್​ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ರಾಯಚೂರಿನ ಸಿರವಾರ ತಾಲೂಕು ಲಿಂಗಸಗೂರು ಪಂಚಾಯಿತಿಯ ಪಿಡಿಓ ಪ್ರವೀಣ್ ಕುಮಾರ್ ಕೆಪಿ ಗಣವೇಶ ಧರಿಸಿ ಲಾಟಿ ಹಿಡಿದು ಭಾಗಿಯಾಗಿದ್ದರು. ಹೀಗಾಗಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸಸ್ಪೆಂಡ್​ ಮಾಡಲಾಗಿದೆ. ಈ ಪಿಡಿಓ ಸಸ್ಪೆಂಡ್​ ಬೆನ್ನಲ್ಲೇ ಮತ್ತಷ್ಟು ಸಿಬ್ಬಂದಿ ಬಗ್ಗೆ ಮಾಹಿತಿ ಕಲೆ ಹಾಕೋದಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

Share This Article