Ad image

ಆಂಧ್ರ, ಒಡಿಶಾ ಕರಾವಳಿಯಲ್ಲಿ ಮೊಂಥಾ ಚಂಡಮಾರುತ ಅಬ್ಬರ – 110 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

Team SanjeMugilu
1 Min Read

ನವದೆಹಲಿ: ಮೊಂಥಾ ಚಂಡಮಾರುತ  ಆಂಧ್ರಪ್ರದೇಶದ ಕರಾವಳಿಯನ್ನು ಅಪ್ಪಳಿಸಿದೆ. ಪರಿಣಾಮ ಆಂಧ್ರಪ್ರದೇಶ ಮತ್ತು ಒಡಿಶಾದ  ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ.

ಮಂಗಳವಾರ ಸಂಜೆ 7 ಗಂಟೆಗೆ ಮೊಂಥಾ ಆಂಧ್ರಪ್ರದೇಶದ ಕರಾವಳಿಯ ಭಾಗವಾದ ಮಚಲಿಪಟ್ಟಣ ಮತ್ತು ಮತ್ತು ಕಳಿಂಗಪಟ್ಟಣ ಮಧ್ಯೆ ಅಪ್ಪಳಿಸಿತು. ಗಂಟೆಗೆ 110 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಕೊನಸೀಮಾ ಜಿಲ್ಲೆಯಲ್ಲಿ ಮರವೊಂದು ಮನೆಯ ಮೇಲೆ ಬಿದ್ದು ವೃದ್ಧ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಚಂಡಮಾರುತ ಆಂಧ್ರಪ್ರದೇಶದ ಕರಾವಳಿಯಾದ್ಯಂತ ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಮತ್ತು ಮುಂದಿನ 6 ಗಂಟೆಗಳಲ್ಲಿ ಅದರ ತೀವ್ರತೆಯನ್ನು ಕಾಯ್ದುಕೊಳ್ಳಲಿದೆ. 6 ಗಂಟೆಯ ನಂತರ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಮುಂದಿನ 36 ಗಂಟೆಗಳಲ್ಲಿ ಇದು ಪೂರ್ವ-ಮಧ್ಯ ಅರಬ್ಬೀ ಸಮುದ್ರದಾದ್ಯಂತ ಈಶಾನ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಕರಾವಳಿ ವೀಕ್ಷಣಾಲಯಗಳು, ಸ್ವಯಂಚಾಲಿತ ಹವಾಮಾನ ಕೇಂದ್ರಗಳು (AWS) , ಹಡಗುಗಳು ಮತ್ತು ಬೋಯ್‌ಗಳು ಮತ್ತು ಉಪಗ್ರಹಗಳ ಜೊತೆಗೆ ಮಚಲಿಪಟ್ಟಣಂ ಮತ್ತು ವಿಶಾಖಪಟ್ಟಣದಲ್ಲಿರುವ ಡಾಪ್ಲರ್ ಹವಾಮಾನ ರಾಡಾರ್ (DWR) ಮೂಲಕ ಈ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಕಾಕಿನಾಡ, ಕೃಷ್ಣ, ಎಲೂರು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಮತ್ತು ಚಿಂತೂರು ಮತ್ತು ರಾಮಪಚೋಡವರಂ ಭಾಗಗಳು ಚಂಡಮಾರುತದ ಗರಿಷ್ಠ ಪರಿಣಾಮವನ್ನು ಕಾಣುತ್ತಿವೆ.

ಮಂಗಳವಾರ ರಾತ್ರಿ 8:30 ರಿಂದ ಬುಧವಾರ ಬೆಳಿಗ್ಗೆ 6 ಗಂಟೆಯವರೆಗೆ ಈ ಏಳು ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು. ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡುಗೆ ಮಾಹಿತಿ ನೀಡಿದ್ದು ನೆಲ್ಲೂರು ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಮೊಂಥಾ ಎದುರಿಸಲು 22 ಎನ್‌ಡಿಆರ್‌ಎಫ್ ತಂಡಗಳ ನಿಯೋಜನೆ ಮಾಡಲಾಗಿದ್ದು ಕರಾವಳಿ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡಲಾಗಿದೆ. 100ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಆಂಧ್ರ ಮತ್ತು ಒಡಿಶಾ ಕರಾವಳಿ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Share This Article