Ad image

RSS ಪಥಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ PDO ಅಮಾನತು: ಆದೇಶಕ್ಕೆ ಕೆಎಸ್‌ಎಟಿ ತಡೆ

Team SanjeMugilu
1 Min Read

ಬೆಂಗಳೂರು: ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ, ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿರುವ ಆದೇಶಕ್ಕೆ ಕೆಎಸ್‌ಎಟಿ ತಡೆ ನೀಡಿದೆ. ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪ್ರವೀಣ್​ ಅವರ ಮೇಲೆ ಹೇರಲಾಗಿದ್ದ ಏಕಪಕ್ಷೀಯ ಅಮಾನತು ಆದೇಶವನ್ನು ನಾವು ಪ್ರಶ್ನಿಸಿದ್ದೆವು. ಈಗ ಅದಕ್ಕೆ ತಡೆ ಸಿಕ್ಕಿದೆ. ಯಾವುದೇ ರೀತಿಯ ಬೆದರಿಕೆ ಆರ್‌ಎಸ್‌ಎಸ್‌ನ ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ. ಈ ಆದೇಶದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ ಎಂದಿದ್ದಾರೆ.

ಆರೆಸ್ಸೆಸ್​ ಶತಮಾನೋತ್ಸವ ಹಿನ್ನಲೆ ಅಕ್ಟೋಬರ್​ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಸಮವಸ್ತ್ರ ಧರಿಸಿ, ಕೈನಲ್ಲಿ ದೊಣ್ಣೆ ಹಿಡಿದ ಗಣವೇಷಧಾರಿಯಾಗಿ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಪಿಡಿಓ ಪ್ರವೀಣ್​ ಭಾಗವಹಿಸಿದ್ದರು. ಇದರಿಂದಾಗಿ ಪ್ರವೀಣ್​, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021ರ ನಿಯಮ 3ರ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಕಾಲದಲ್ಲಿಯೂ ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು ಮತ್ತು ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದ್ದು ಹಾಗೂ ಸರ್ಕಾರಿ ನೌಕರನಿಗೆ ತಕ್ಕದಲ್ಲದನ್ನು ಮಾಡಬಾರದೆಂಬುದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕೆ ಅವರನ್ನು ಅಮಾನತು ಮಾಡಿ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಆದೇಶಿಸಿದ್ದರು.

ಅಮಾನತು ಬೆನ್ನಲ್ಲೇ ಪ್ರವೀಣ್​ ಜೊತೆ ಈ ಬಗ್ಗೆ ಚರ್ಚಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾನೂನುಬಾಹಿರ ಮತ್ತು ಅಕ್ರಮ ಅಮಾನತನ್ನು ಪ್ರಶ್ನಿಸಲು ನಾನು ವೈಯಕ್ತಿಕವಾಗಿ ಸಂಬಂಧಪಟ್ಟ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ಮುಂದೆ ಹಾಜರಾಗುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದರು. ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರ ಹಕ್ಕನ್ನು ಎತ್ತಿಹಿಡಿದಿರುವ ಹೈಕೋರ್ಟ್‌ಗಳ ಅನೇಕ ತೀರ್ಪುಗಳಿವೆ. ಈ ಅಕ್ರಮ ಅಮಾನತು ರದ್ದಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಂದು ಕೊಟ್ಟ ಮಾತಿನಂತೆ ಸಂಸದರು ಪ್ರವೀಣ್​ಗೆ ಕಾನೂನುಹೋರಾಟದಲ್ಲಿ ನೆರವಾಗಿದ್ದು, ಸರ್ಕಾರದ ಆದೇಶಕ್ಕೀಗ ಕೆಎಸ್‌ಎಟಿ ತಡೆ ನೀಡಿದೆ.

Share This Article