ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ಅವರ ಮೂಲಕ ನಡೆದ ಸ್ಮಾರ್ಟ್ ಲಾಕ್ ಅಳವಡಿಕೆ ವಿಚಾರದಲ್ಲಿ ಬಹುದೊಡ್ಡ ಭ್ರಷ್ಟಾಚಾರ ಆಗಿದೆ. ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಯು.ಟಿ.ಖಾದರ್ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಅವರು ಒತ್ತಾಯಿಸಿದ್ದಾರೆ.
ನಗರದ ಶಾಸಕರ ಭವನ ಸಂಖ್ಯೆ 3ರ, 3ನೇ ಮಹಡಿಯ ಕೊಠಡಿ ಸಂಖ್ಯೆ 345ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಯು.ಟಿ.ಖಾದರ್ ಅವರು ತಮ್ಮ ಕಚೇರಿ ಮೂಲಕ ಶಾಸಕರ ಭವನದ 224 ಕೊಠಡಿಗಳಿಗೆ ಸ್ಮಾರ್ಟ್ ಲಾಕ್ (ಡೋರ್ ಲಾಕ್) ಅಳವಡಿಸಿದ್ದಾರೆ. ಶಾಸಕರು ಇದನ್ನು ಕೇಳಿರದಿದ್ದರೂ ಹಾಕಿದ್ದು, ಲಾಕ್ ವೆಚ್ಚ ಮತ್ತು ಬಿಲ್ ಖರ್ಚಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಆರೋಪಿಸಿದರು. ಒಂದು ಬೀಗ ಖರೀದಿ ವೆಚ್ಚದಲ್ಲಿ 3 ಲಾಕ್ ಖರೀದಿಸಬಹುದಾದಷ್ಟು ವೆಚ್ಚವನ್ನು ತೋರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಉತ್ತಮ ಗುಣಮಟ್ಟದ ಸ್ಮಾರ್ಟ್ ಲಾಕ್ ಬೆಲೆ 11,744 ರೂ. ಎಂದು ಅವರು ಮಾರುಕಟ್ಟೆ ದರದ ಕುರಿತ ವಿವರವನ್ನು ಪ್ರದರ್ಶಿಸಿದರು. ಇದಕ್ಕೆ ಇವರು 49,300 ರೂ. ದರ ವಿಧಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಉದ್ದೇಶಪೂರ್ವಕವಾಗಿ ತಮ್ಮ ಜಿಲ್ಲೆಯ ಆತ್ಮೀಯರಿಗೆ ಟೆಂಡರ್ ಕೊಡಿಸಿದ್ದು, ಸುಮಾರು 37,500 ರೂ. ಗಳಷ್ಟು ಹೆಚ್ಚು ಬಿಲ್ ಆಗಿದೆ ಎಂದು ದೂರಿದರು.
ನಾವು ಕೇಳದಿದ್ದರೂ ಸ್ಮಾರ್ಟ್ ಲಾಕರ್ ಕೊಟ್ಟಿದ್ದು, ಅದರ ಬೆಲೆಯಲ್ಲೂ ಅಜಗಜಾಂತರ ವ್ಯತ್ಯಾಸ ಇದೆ. ಮಾರುಕಟ್ಟೆ ದರ 8,100 ರೂ ಇದ್ದು, 35 ಸಾವಿರ ಬಿಲ್ ಮಾಡಿದ್ದಾರೆ. ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ಅನವಶ್ಯಕವಾಗಿ ದುಂದು ವೆಚ್ಚ ಮಾಡಿ ಅವರ ಕಚೇರಿ ವತಿಯಿಂದ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಲಕ್ಷಾಂತರ ರೂ. ಭ್ರಷ್ಟಾಚಾರ ಆಗಿದ್ದು, ಯು.ಟಿ.ಖಾದರ್ ಅವರು ಈ ಕುರಿತು ಸ್ಪಷ್ಟನೆ ಕೊಡಬೇಕಿದೆ. ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹವನ್ನು ಮುಂದಿಟ್ಟರು. ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಒಳಗಡೆಯೂ ಹಲವಾರು ರೀತಿಯ ದುಂದುವೆಚ್ಚ ಆಗಿದೆ ಎಂದು ಟೀಕಿಸಿದರು. ಸ್ಮಾರ್ಟ್ ಲಾಕ್ಗೆ ಲೀಥಿಯಂ ಬ್ಯಾಟರಿ ಎಂದು ತೋರಿಸಿದ್ದು, ಮಾಮೂಲಿ ಬ್ಯಾಟರಿ ಅಳವಡಿಸುವ ಲಾಕ್ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ತಮ್ಮ ಕೈಯಲ್ಲಿದ್ದ ಸ್ಮಾರ್ಟ್ ಲಾಕ್ ಅನ್ನು ಪ್ರದರ್ಶಿಸಿದರು.
ಸಾರ್ವಜನಿಕ ವಲಯದಲ್ಲಿ ಸಂದೇಹ ಬಂದಾಗ ಉತ್ತರ ಕೊಡಬೇಕಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಾವು ಕೊಟ್ಟಿರುವುದು ಜಿಎಸ್ಟಿ ಸೇರಿದ ದರ ಎಂದು ತಿಳಿಸಿದರು. ಸ್ಪೀಕರ್ ಅವರು ಮಾರುಕಟ್ಟೆಯಲ್ಲಿ ವಿವರ ಪಡೆದುಕೊಳ್ಳಲಿ ಎಂದು ಅವರು ಸ್ಪಷ್ಟಪಡಿಸಿದರು. ಸ್ಪೀಕರ್ ಅವರು ಮೊದಲು ಸ್ಪಷ್ಟನೆ ಕೊಡಲಿ; ನಮ್ಮ ಮುಂದಿನ ನಡೆಯ ಕುರಿತು ಆಮೇಲೆ ತಿಳಿಸುತ್ತೇವೆ ಎಂದರು.
ಮಾನ್ಯ ರಾಜ್ಯಪಾಲರಿಗೆ ದೂರು ಕೊಡುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ. ಅದರ ಕುರಿತು ನಮ್ಮ ನಾಯಕರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಅವರು ಮಾತನಾಡಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಭೀಮ್ ಆರ್ಮಿ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನದ ವಿಷಯದಲ್ಲಿ ಅಡ್ಡಿ ಮಾಡುತ್ತಿದ್ದಾರೆ. ಭೀಮ್ ಆರ್ಮಿ ಎಂಬುದು ಡಾ.ಬಾಬಾಸಾಹೇಬ ಅಂಬೇಡ್ಕರರ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಅದರಲ್ಲಿ ದಲಿತ ಸಮುದಾಯ- ಜನಾಂಗದ ಪ್ರತಿನಿಧಿಗಳು ಇಲ್ಲ ಎಂದು ನುಡಿದರು.
ಬೆಂಗಳೂರಿನಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಮುಖ್ಯಸ್ಥರೇ ಮುಂದೆ ನಿಂತು ಹೋರಾಟ ಮಾಡಿದ್ದಾರೆ. ಚಿತ್ತಾಪುರದಲ್ಲೂ ಅದೇ ಸಂಘಟನೆಯವರು ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಭೀಮ್ ಆರ್ಮಿ ಹೆಸರನ್ನು ಬದಲಿಸಿ ಅಲ್ಪಸಂಖ್ಯಾತರ ಆರ್ಮಿ ಅಥವಾ ಧರ್ಮಗುರುಗಳ ಹೆಸರನ್ನು ಇಡುವಂತೆ ಎಂದು ಪ್ರಿಯಾಂಕ್ ಖರ್ಗೆಯವರಿಗೆ ತಿಳಿಸಲು ಬಯಸುವುದಾಗಿ ಹೇಳಿದರು.
ಶಾಸಕ ಚಂದ್ರು ಲಮಾಣಿ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಅವರು ಉಪಸ್ಥಿತರಿದ್ದರು.
