Ad image

ಕದ್ರಿ ಪಾರ್ಕ್‌ಗೆ ಬರಬೇಕಿದ್ರೂ ಕಟ್ಟಬೇಕು ಟೋಲ್ – ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಜನರ ಆಕ್ರೋಶ

Team SanjeMugilu
1 Min Read

ಮಂಗಳೂರು: ಕಡಲ ತಡಿ ಮಂಗಳೂರಿನ  ಕದ್ರಿ ಪಾರ್ಕ್, ಸ್ಮಾರ್ಟ್ ಸಿಟಿ  ಯೋಜನೆಯಲ್ಲಿ ಅಭಿವೃದ್ಧಿಗೊಂಡು ಕಂಗೊಳಿಸುತ್ತಿದೆ. ಸಾವಿರಾರು ಮಂದಿ ಪ್ರತಿನಿತ್ಯ ಕದ್ರಿ ಪಾರ್ಕ್‌ಗೆ ಬಂದು ರಿಲ್ಯಾಕ್ಸ್ ಆಗುತ್ತಾರೆ. ಆದ್ರೆ ಪಾರ್ಕ್‌ನ ರಸ್ತೆಗೆ ಟೋಲ್ ಸಿಸ್ಟಮ್ ರೀತಿಯ ಪಾರ್ಕಿಂಗ್ ಶುಲ್ಕಕ್ಕೆ ಸ್ಮಾರ್ಟ್ ಸಿಟಿ ನಿರ್ಧರಿಸಿದೆ.

ಕದ್ರಿ ಪಾರ್ಕ್ , ಕಡಲ ತಡಿ ಮಂಗಳೂರಿನ ಯುವಕ ಯುವತಿಯರ ಫೇವರೆಟ್ ಸ್ಪಾಟ್. ವಾಯು ವಿಹಾರಿಗಳ ನೆಚ್ಚಿನ ತಾಟ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಗೊಂಡು ಕದ್ರಿ ಪಾರ್ಕ್ ನಳನಳಿಸುತ್ತಿದೆ. ಪ್ರತಿನಿತ್ಯ ಸಾವಿರಾರು ಮಂದಿ, ಕದ್ರಿ ಪಾರ್ಕ್ಗೆ ಬರುತ್ತಾರೆ. ಆದ್ರೆ ಜನವರಿಯಿಂದ ಕದ್ರಿ ಪಾರ್ಕ್ಗೆ ಬರುವವರಿಗೆ ಟೋಲ್ ರೀತಿಯಲ್ಲೇ ಹಣ ಕಟ್ ಆಗುವ ಬಿಸಿ ತಟ್ಟಲಿದೆ.

ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂಗಡಿಗಳನ್ನು ಖಾಸಗಿ ಸಂಸ್ಥೆ ಟೆಂಡರ್ ಮೂಲಕ ಪಡೆದುಕೊಂಡಿದೆ. ಇದೇ ಸಂಸ್ಥೆ ಕದ್ರಿ ಪಾರ್ಕ್ನ ಅಂಗಡಿ, ರಸ್ತೆ ಫುಟ್‌ಪಾತ್, ಪಾರ್ಕಿಂಗ್ ಜಾಗವನ್ನು ನಿರ್ವಹಣೆ ಮಾಡಲಿದೆ. ಆದರೆ ಟೆಂಡರ್ ಪಡೆದ ಸಂಸ್ಥೆಗೆ ಇದರಿಂದ ನಿರೀಕ್ಷಿತ ಪ್ರಮಾಣದ ಆದಾಯ ಸಿಗುತ್ತಿಲ್ಲ. ಹೀಗಾಗಿ ಕದ್ರಿ ಪಾರ್ಕ್ ರಸ್ತೆಗೆ ಟೋಲ್‌ಗೇಟ್ ರೀತಿಯಲ್ಲೇ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ವಾಹನದ ನಂಬರ್ ಪ್ಲೇಟ್ ಇಮೇಜ್ ಸೆರೆಹಿಡಿದು ವಾಹನದ ಫಾಸ್ಟ್ ಟ್ಯಾಗ್‌ಗೆ ಲಿಂಕ್ ಮಾಡಲಾಗುತ್ತದೆ. 5 ನಿಮಿಷದ ಒಳಗೆ ತೆರಳಿದ್ರೆ ಯಾವುದೇ ಶುಲ್ಕ ಕಟ್ ಆಗಲ್ಲ. ಹೆಚ್ಚಾದ್ರೆ, 50 ರೂ. ಹಣ ಕಟ್ ಆಗಲಿದೆ.

ಇನ್ನೂ, ಟೋಲ್ ರೀತಿಯ ಹಣ ಸಂಗ್ರಹಕ್ಕೆ ಮುಂದಾಗಲಿರುವ ಸ್ಮಾರ್ಟ್ ಸಿಟಿ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಪಾರ್ಕ್ ರಸ್ತೆಗೆ ಟೋಲ್ ರೀತಿಯ ಶುಲ್ಕ ಮಾಡಿದ್ರೆ ಪಾರ್ಕ್ ಜನ ಬರೋದು ಹೇಗೆ? ಇದರಿಂದ ಸುಗಮ ವಾಹನ ಸಂಚಾರಕ್ಕೂ ತೊಡಕಾಗುತ್ತೆ. ಹೀಗಾಗಿ ಯಾವುದೇ ಕಾರಣಕ್ಕೂ ಹೆದ್ದಾರಿಯಂತೆ ಇಲ್ಲಿ ಟೋಲ್ ಬೇಡ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Share This Article