ರಾಜ್ಯದಲ್ಲಿ ಒಂದು ಕಡೆ ಇನ್ನೂ ಮಳೆ ಆರ್ಭಟ ಮುಂದುವರೆದಿದೆ. ಆದ್ರೆ ಚಳಿ ಶುರುವಾಗಿದೆ. ಜನ ಥಂಡಿಗೆ ಸಾಕಾಗಿದ್ದಾರೆ. ಮಳೆ ಜೊತೆ ಚಳಿಯೂ ಜನರನ್ನು ಕಾಡುತ್ತಿದೆ.
ಚಳಿಗಾಲ ನವೆಂಬರ್ ಅಂತ್ಯದಲ್ಲಿ ಶುರುವಾಗುತ್ತಿತ್ತು. ಆದ್ರೆ ಈ ಬಾರಿ ನವೆಂಬರ್ ಮೊದಲೇ ಆರಂಭವಾಗಿದೆ. ಒಂದು ವಾರದಿಂದ ಜನ ಚಳಿ ವಾತಾವರಣ ಅನುಭವಿಸುತ್ತಿದ್ದಾರೆ. ಬೆಳಗ್ಗೆ ಚಳಿ ಹೆಚ್ಚಿರುತ್ತೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಚಳಿ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಕೊಪ್ಪಳ, ಹಾವೇರಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದೆ.
ಕರ್ನಾಟಕದಲ್ಲಿ ಈ ಬಾರಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅದು ಬೆಳಗ್ಗಿನ ಸಮಯದಲ್ಲಿ ಕೊರೆಯುವ ಚಳಿ ಇರುತ್ತೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ.
ಇನ್ನು ನವೆಂಬರ್ 7 ರಿಂದ ನವೆಂಬರ್ 10 ರವರೆಗೆ, ಬೆಂಗಳೂರಿನಲ್ಲಿ ಮಳೆಯಿಲ್ಲದೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಹಗಲಿನ ವೇಳೆಯಲ್ಲಿ ತಾಪಮಾನವು ಸುಮಾರು 30 ಡಿಗ್ರಿ ಮತ್ತು ರಾತ್ರಿ 19 ಡಿಗ್ರಿಗಳಲ್ಲಿ ಸ್ಥಿರವಾಗಿರುತ್ತದೆ. ಆದ್ರ್ರತೆಯ ಮಟ್ಟವು ಕ್ರಮೇಣ ಶೇಕಡಾ 90 ರಿಂದ ಶೇಕಡಾ 75 ಕ್ಕೆ ಇಳಿಯುತ್ತದೆ.
ನವೆಂಬರ್ 6 ಮತ್ತು 7 ರಂದು ಕೆಲವು ಪ್ರದೇಶಗಳಲ್ಲಿ ಚದುರಿದ ಭಾರೀ ಮಳೆ ಮತ್ತು ಬಿರುಗಾಳಿಯ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.
ಅವಧಿಗೂ ಮುಂಚೆಯೇ ಶುರುವಾದ ಥಂಡಿ, ಈ ಬಾರಿ ಹೆಚ್ಚಾಗಿರಲಿದೆ ಕೊರೆಯುವ ಚಳಿ!
