ಶಿವಮೊಗ್ಗ: ಜಿಲ್ಲೆಯ ಭದ್ರಾವತಿ (ಭದ್ರಾವತಿ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಚುನಾವಣಾ ರಾಜಕೀಯದಿಂದ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ಸಂಗಮೇಶ್, ಇದೀಗ ತಮ್ಮ ರಾಜಕೀಯ ಪಯಣಕ್ಕೆ ಅಂತ್ಯ ಘೋಷಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೋದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತನ್ನ ಈ ನಿರ್ಧಾರಕ್ಕೆ ಇದೊಂದೇ ಕಾರಣ ಅಂತ ಬಿಕೆ ಸಂಗಮೇಶ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ರಾಜಕೀಯಕ್ಕೆ ಬಿಕೆ ಸಂಗಮೇಶ್ ಗುಡ್ ಬೈ
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಂಗಮೇಶ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಾನು ಈಗ ನನ್ನ ರಾಜಕೀಯ ಪಯಣ ಮುಗಿಸುತ್ತಿದ್ದೇನೆ. ಕ್ಷೇತ್ರದ ಜನತೆ ನನ್ನ ಮಗ ಗಣೇಶ್ ಅವರಿಗೆ ಆಶೀರ್ವಾದ ನೀಡಿ, ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜಕೀಯ ಜೀವನ ನೆನಪಿಸಿಕೊಂಡ ಶಾಸಕ
ಸಂಗಮೇಶ್ ತಮ್ಮ ರಾಜಕೀಯ ಜೀವನದ ಪಯಣವನ್ನು ನೆನಪಿಸಿಕೊಂಡು, ನನ್ನ ಮೇಲೆ ಜನತೆ ತೋರಿದ ಪ್ರೀತಿ, ನಂಬಿಕೆ ಮತ್ತು ಬೆಂಬಲ ಎಂದಿಗೂ ಮರೆಯಲಾಗದು ಎಂದಿದ್ದಾರೆ. ಈಗ ನನ್ನ ಸಹೋದರರು, ಮಕ್ಕಳು ಎಲ್ಲರೂ ಮುಂದಿನ ತಲೆಮಾರಿನ ರಾಜಕೀಯಕ್ಕೆ ತಯಾರಾಗಿದ್ದಾರೆ. ಅವರಿಗೆ ನಿಮ್ಮ ಸಹಕಾರ ಅಗತ್ಯ ಎಂದಿದ್ದಾರೆ. ಈ ಮೂಲಕ ಅವರು ತಮ್ಮ ಉತ್ತರಾಧಿಕಾರಿಯ ಪಟ್ಟಾಭಿಷೇಕ ಸಿದ್ದತೆಯನ್ನು ಈ ಮೊದಲೆ ನಡೆಸಿದ್ದು, ಅದರ ಸುಳಿವನ್ನು ಮಾತ್ರ ಈಗ ನೀಡಿದ್ದಾರೆ.
ರಾಜಕೀಯ ಎಂಟ್ರಿಗೆ ತಯಾರಿ ನಡೆಸಿರೋ ಸಂಗಮೇಶ್ ಪುತ್ರ
ಈ ವೇಳೆ ಶಾಸಕರ ಪುತ್ರ ಗಣೇಶ್ ಅವರು ಭದ್ರಾವತಿ ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಈಗಾಗಲೇ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದು, ಮುಂದಿನ ಚುನಾವಣೆಗೆ ತೀವ್ರ ತಯಾರಿ ಆರಂಭಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಈ ನಿಟ್ಟಿನಲ್ಲಿ ಗಣೇಶ ರಾಜಕೀಯಕ್ಕೆ ಎಂಟ್ರಿ ಕೊಟ್ಟರೂ, ತಂದೆಯ ವಿವಾದ್ಮತಕ ಹೇಳಿಕೆ, ತಮ್ಮನ ಅನಾಗರಿಕ ವರ್ತನೆ ಗಣೇಶ್ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಶಿವಮೊಗ್ಗ ಜನಾರ್ಶೀವಾದ ಹೇಗಿರಲಿದೆ ಎಂಬುದು ಕುತೂಹಲ ಹುಟ್ಟಿಸಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕುರಿತು ಕುತೂಹಲ
ಬಿ.ಕೆ. ಸಂಗಮೇಶ್ ಅವರ ಈ ನಿರ್ಧಾರವು ಭದ್ರಾವತಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಯಾರು ಎನ್ನುವ ಕುತೂಹಲವೂ ಹೆಚ್ಚಿದೆ. ಏಕೆಂದರೇ, ಬಹುತೇಕ ರಾಜಕಾರಣಿಗಳ ಉತ್ತರಾಧಿಕಾರಿಗಳು ಅವರ ಮಕ್ಕಳೇ ಇರುತ್ತಾರೆ. ಇಲ್ಲಿ ಸಾಮಾನ್ಯ ಕಾರ್ಯಕರ್ತ ಅವರಿಗೆ ಜೈ ಅಂದು ಅವರ ಬ್ಯಾನರ್ ಕಟ್ಟಬೇಕೇ ಹೊರತು, ಇನ್ನೇನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂಗಮೇಶ್ ಅವರಿಂದ ತೆರವಾದ ಸ್ಥಾನಕ್ಕೆ ಅವರ ಮಗನೇ ಬರುತ್ತಾನೆಯೇ ಅಥವಾ ಯಾರಾದರೂ ಕಾಂಗ್ರೆಸ್ನಲ್ಲಿ ಹೊಸ ಆಕಾಂಕ್ಷಿ ಹುಟ್ಟಿಕೊಳ್ಳುತ್ತಾರೆಯೇ ಎನ್ನುವುದು ಚರ್ಚೆ ಕಾರಣವಾಗಿದೆ.
ಗಣೇಶ್ ಭವಿಷ್ಯವೇನು?
ರಾಜಕೀಯಕ್ಕೆ ಪದಾರ್ಪಣೆ ಮಾಡಲು ಸಜ್ಜಾಗುತ್ತಿರುವ ಗಣೇಶ್ ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಸಮಯವೇ ತೋರಿಸಬೇಕಾಗಿದೆ. ಇಲ್ಲಿ ತೋರಿಸುವುದು ಏನಿಲ್ಲ. ತಂದೆಗಿದ್ದ ಬೆಂಬಲಿಗರೇ ಇವರ ಬೆನ್ನಿಗೆ ನಿಲ್ಲಬಹುದು. ಆದರೇ ಭದ್ರಾವತಿ ಕುಟುಂಬ ರಾಜಕಾರಣದ ಕಡಲಲ್ಲಿ ಬೆಳೆದ ಗಣೇಶ ಅವರಿಗೆ ಮತ ನೀಡಿ ವಂಶಾಡಳಿತ ರಾಜಕಾರಣಕ್ಕೆ ಪುಷ್ಠಿ ನೀಡುತ್ತದೆಯಾ? ಅಥವಾ ಹೊಸ ಮುಖಕ್ಕೆ ಮಣೆ ಹಾಕಲಿದೆಯಾ ಎನ್ನುವುದು ಮುಂದಿನ ಚುನಾವಣೆಯಲ್ಲೇ ಸ್ಪಷ್ಟವಾಗಲಿದೆ.
ಚುನಾವಣೆಗೆ ಗುಡ್ ಬೈ ಎಂದ ಕಾಂಗ್ರೆಸ್ ಶಾಸಕ! ದಿಢೀರ್ ನಿವೃತ್ತಿ ಘೋಷಿಸಿದ್ದೇಕೆ ಬಿಕೆ ಸಂಗಮೇಶ್?
