ಬೆಂಗಳೂರು: ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಸಚಿವ ಸಂಪುಟ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ರು. ರೈತರ ಮುಗ್ದತೆ ಬಳಸಿಕೊಂಡು, ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿಗೆ ಇದ್ದರೂ, ವಿಪಕ್ಷಗಳು ರಾಜಕಾರಣ ಮಾಡಲು ಹೊರಟಿದ್ದಾರೆ. ವಿಪಕ್ಷಗಳ ಮಾತಿಗೆ ಬಲಿಯಾಗಬೇಡಿ ಅಂತ ಸಿಎಂ ಕರೆ ನೀಡಿದರು. ಇನ್ನು ಬೆಂಬಲ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರಲಿದ್ದು, ಈ ಕುರಿತಂತೆ ಭೇಟಿಗೆ ಅವಕಾಶ ಕೇಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಳೆಯೇ ಪತ್ರ ಬರೆಯೋದಾಗಿ ಸಿಎಂ ಹೇಳಿದ್ದಾರೆ.
ಸಚಿವರಿಗೆ ಸಮಸ್ಯೆ ಆಲಿಸಲು ಹೇಳಿದ್ದೇನೆ
ನಾಳೆ 11 ಘಂಟೆಗೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡ್ತಿದ್ದೇವೆ. ಇಂದಿನ ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಸುಧೀರ್ಘ ಚರ್ಚೆ ಮಾಡಿದೆವು. ಕ್ಯಾಬಿನೆಟ್ ಗೂ ಮುನ್ನ ಎಂ.ಬಿ.ಪಾಟೀಲ್, ಹೆಚ್.ಕೆ.ಪಾಟೀಲ್‌ಗೂ ಮಾತನಾಡಿ ಬೆಳಗಾವಿ ಬಿಜಾಪುರಕ್ಕೆ ಹೋಗುವಂತೆ ಹೇಳಿದ್ದೆ ಅಂತ ಹೇಳಿದ್ದಾರೆ.
ಬೆಂಬಲ ಬೆಲೆ ನಿಗದಿ ಮಾಡೋದು ಕೇಂದ್ರ ಸರ್ಕಾರ
ಕಬ್ಬು ಬೆಳೆಗಾರರ ಪ್ರತಿಭಟನೆ ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮದು ಯಾವತ್ತೂ ರೈತ ಪರ ಸರ್ಕಾರ. ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಇಬ್ಬರೂ ಸಕ್ಕರೆ ಕಾರ್ಖಾನೆ ಮಾಲೀಕರು. ಹೀಗಾಗಿ ಅವರು ರೈತರ ಬಳಿ ಹೋಗಲಿಲ್ಲ. ಎಫ್‌ಆರ್‌ಪಿ ನಿಗದಿ ಮಾಡೋರು ಕೇಂದ್ರ ಸರ್ಕಾರದವ್ರು. 06/05/2025 ರಂದು ನಿಗದಿ ಮಾಡಿದ್ದಾರೆ. ಟನ್‌ಗೆ 10.25 ರಿಕವರಿ, 3500 ಪ್ರತಿಟನ್‌ಗೆ, ಇನ್‌ಕ್ಲೂಡಿಂಗ್ ಟ್ರಾನ್ಸ್‌ಪೋರ್ಟ್ ಸೇರಿ 3550 ಇದೆ. 10.25 ಜಾಸ್ತಿ ರಿಕವರಿ ಇದ್ರೆ ಹೆಚ್ಚುವರಿ ಬಂದ್ರೆ 3.45 ರೂ ಕೊಡಲು ಹೇಳಿದ್ದಾರೆ ಅಂತ ಮಾಹಿತಿ ನೀಡಿದ್ರು.
ಕೇಂದ್ರದ ಆದೇಶ ಜಾರಿ ಮಾಡೋದು ನಮ್ಮ ಕೆಲಸ
10.25 ಗಿಂತ ರಿಕವರಿ ಕಡಿಮೆ ಬಂದ್ರೆ ಕಡಿಮೆ ಮಾಡುವುದು. 9.05 ಗಿಂತ ಕಡಿಮೆ ಇದ್ರೆ ಪ್ರತಿ ಟನ್ 3290.50 ರೂ ಕೊಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಎಫ್‌ಆರ್‌ಪಿ ತೀರ್ಮಾನ ಮಾಡೋದು ನಾವಲ್ಲ, ಕೇಂದ್ರ ಸರ್ಕಾರ. ನಾವು ಅದನ್ನ ಅನುಷ್ಠಾನ ಮಾಡುವ ಜಾರಿ ಮಾಡುವ ಕೆಲಸ ಮಾಡ್ತೇವೆ ಅಂತ ಸಿಎಂ ಹೇಳಿದ್ರು. ಕಬ್ಬು ನಿಯಂತ್ರಣ ಸಂಬಂಧ ಕಾಯ್ದೆಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಎಫ್‌ಆರ್‌ಪಿ ಪ್ರಕಾರ ಕೊಡ್ತಿದ್ದಾರೆ, ನಿಗಧಿತ ಅವಧಿಯೊಳಗೆ ಹಣ ಕೊಡ್ತಿದ್ದಾರ ಅಂತ ನೋಡೋದು ನಮ್ಮ ಕೆಲಸ. ಎಫ್‌ಆರ್‌ಪಿ ನಿಗಧಿ ಅಷ್ಟೇ ಸಕ್ಕರೆ ಮೇಲಿನ ನಿಗಧಿಯನ್ನ ಕೇಂದ್ರ ಸರ್ಕಾರವೇ ಹೊಂದಿದೆ ಅಂತ ಸ್ಪಷ್ಟಪಡಿಸಿದ್ರು.
2019ರಿಂದ ಬೆಂಬಲ ಬೆಲೆ ಏರಿಸಿಲ್ಲ
ಸಕ್ಕರೆ ಬೆಲೆ 2019 ರಲ್ಲಿ 31 ರೂಪಾಯಿ ನಿಗದಿ ಮಾಡಿದ್ರು. ಅಂದಿನಿಂದ ಇಂದಿನವರೆಗೂ ಎಂಎಸ್‌ಪಿ ಏರಿಕೆ ಮಾಡಿಲ್ಲ. ಸಕ್ಕರೆ ರಫ್ತು ಮಾಡುವುದನ್ನ ನಿಲ್ಲಿಸಿದ್ದಾರೆ. ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತಿಗೆ ಅವಕಾಶ ಕೊಟ್ಟಿದ್ದಾರೆ. ಕರ್ನಾಟಕ ಒಂದರಲ್ಲೇ 41 ಲಕ್ಷ ಟನ್ ಸಕ್ಕರೆ ಉತ್ಪಾಧನೆ ಆಗ್ತಿದೆ. ಎಥಿನಾಲ್ ಎಷ್ಟು ತಯಾರು ಮಾಡಬೇಕು, ಎಷ್ಟು ಖರೀದಿ ಮಾಡಬೇಕು ಎಂಬುದನ್ನ ನಿಗಧಿ ಮಾಡೋದು ಕೇಂದ್ರವೇ. ಕರ್ನಾಟಕದಲ್ಲಿ 270 ಕೋಟಿ ಲೀಟರ್ ಎಥಿನಾಲ್ ಉತ್ಪಾಧನೆ ಮಾಡಲಾಗ್ತಿದೆ. ಆದರೆ ನಮಗೆ 24-25 ರಲ್ಲಿ 47 ಕೋಟಿ ಲೀಟರ್‌ನ ಹಂಚಿಕೆ ಮಾಡಲಾಗಿದೆ ಎಂದರು.
ರೈತರ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ
ಇದು ಕೇಂದ್ರ ಸರ್ಕಾರ ರಾಜ್ಯ ರೈತರ ಜೊತೆ ಆಡುತ್ತಿರುವ ಚೆಲ್ಲಾಟ. ಇದೊಂದು ಸ್ಪಷ್ಟ ನಿದರ್ಶನ ಎಂದು ಸಿಎಂ ಗುಡುಗಿದ್ರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 11 ಕಡೆ ಡಿಜಿಟಲ್ ತೂಕದ ಯಂತ್ರ ಮಾಡಲು ತೀರ್ಮಾನ ಮಾಡಿ, ಇದಕ್ಕಾಗಿ 8 ಕಡೆ ಟೆಂಡರ್‌ಗಳನ್ನ ಕರೆಯಲಾಗಿದೆ. ತೂಕ ಇಳುವರಿ ಕಟಾವು ಬಿಲ್ ಪಾವತಿ ಉಸ್ತುವಾರಿಗೆ ಸಮಿತಿ ರಚನೆ ಮಾಡಲಾಗಿದೆ. 522 ಮೆಟ್ರಿಕ್ ಟನ್ ಕಬ್ಬನ್ನು ಕಳೆದ ವರ್ಷ ಅರೆಯಲಾಗಿದೆ. ಈ ವರ್ಷ ಎಷ್ಟು ಟನ್ ಕಬ್ಬು ಅರೆಯುತ್ತೇವೆ ತಿಳಿಯಬೇಕು ಎಂದರು.
ಪ್ರಧಾನಿ ಭೇಟಿಗೆ ರೈತರ ನಿಯೋಗ
ಇನ್ನು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಬಿಜೆಪಿಯವ್ರು ಬೆಳಗಾವಿಗೆ ಹೋಗಿ ಮಲಗುತ್ತಾರೆ. ಆದರೆ ದೆಹಲಿಗೆ ಹೋಗಿ ಯಾಕೆ ಕೇಂದ್ರದವರನ್ನ ಕೇಳ್ತಿಲ್ಲ? ಅಂತ ಪ್ರಶ್ನಿಸಿದ್ರು. ಪ್ರಧಾನಿ ಅನುಮತಿ ಕೊಟ್ಟರೆ ರೈತರ ಜೊತೆ ನಿಯೋಗ ತೆಗೆದುಕೊಂಡು ಹೋಗಿ, ಸಮಸ್ಯೆ ಬಗ್ಗೆ ತಿಳಿಸುತ್ತೇವೆ ಅಂತ ಭರವಸೆ ನೀಡಿದ್ರು.
ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂ! ಮೋದಿಗೆ ಪತ್ರ ಬರೆಯುತ್ತೇನೆ ಎಂದ ಸಿದ್ದರಾಮಯ್ಯ
