Ad image

ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರಲ್ಲಿ ಮತ್ತೊಬ್ಬ ರೈತ ಬಲಿ

Team SanjeMugilu
1 Min Read

ಮೈಸೂರು: ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರಿದಿದ್ದು, ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್​ ಸ್ವಾಮಿ(58) ಮೃತಪಟ್ಟಿದ್ದಾರೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದ್ದು, ಇದೇ ರೈತ 8 ತಿಂಗಳ ಹಿಂದೆ ಆನೆ ದಾಳಿಗೆ ಒಳಗಾಗಿದ್ದ ಎನ್ನಲಾಗಿದೆ.

ವ್ಯಾಘ್ರನ ಅಟ್ಟಹಾಸಕ್ಕೆ ರೈತರು ಕಂಗಾಲು
ಪದೇ ಪದೇ ಹುಲಿ ದಾಳಿ ಹಿನ್ನಲೆ ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದು, ಕೆಲಸಕ್ಕೆ ಹೋಗಲೂ ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ದಾಳಿಯಿಂದ ಈಗಾಗಲೇ ಹಲವು ರೈತರು ಪ್ರಾಣ ಕಳೆದುಕೊಂಡಿರುವ ನಡುವೆ ದನ ಕಾಯುತ್ತಿದ್ದ ರೈತನ ಬಳಿಯೇ ಹುಲಿ ಬಂದ ಘಟನೆ ಮೊನ್ನೆ ಮೊನ್ನೆಯಷ್ಟೇ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದಿತ್ತು. ಹುಲಿ ಕಂಡು ಬೊಬ್ಬೆ ಹೊಡೆಯುತ್ತಾ ಹೊಲದಿಂದ ಓಡಿ ರೈತ ಪ್ರಾಣ ಉಳಿಸಿಕೊಂಡಿದ್ದ. ಹುಲಿ ಓಡಾಟದ ದೃಶ್ಯ ಕೂಡ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳ ಮೇಲೂ ವ್ಯಾಘ್ರ ದಾಳಿ ನಡೆಸುತ್ತಿದ್ದು ಮೇಯಲು ಹೋದ ಪ್ರಾಣಿಗಳ ಜೊತೆಗೆ, ಕೊಟ್ಟಿಗೆಗೂ ನುಗ್ಗಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಂಜನಗೂಡು ತಾಲೂಕಿನ ಉಪ್ಪನಹಳ್ಳಿಯಲ್ಲಿ ರೈತ ಸಣ್ಣಮಾದಯ್ಯ ಎಂಬವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಮೇಕೆಯನ್ನು ಕೊಂದು ತಿಂದಿತ್ತು. ಕಾಡಂಚಿನ ಪ್ರದೇಶದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ವ್ಯಾಘ್ರ, ಊರಿಗೇ ಎಂಟ್ರಿ ಕೊಟ್ಟಿರೋದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿತ್ತು. ಮೈಸೂರು ಭಾಗದಲ್ಲಿ ನಿರಂತರ ಹುಲಿ ದಾಳಿ ಪ್ರಕರಣ ಹಿನ್ನಲೆ ಅರಣ್ಯ ಇಲಾಖೆ ವಿರುದ್ಧ ಈಗಾಗಲೇ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಇಲಾಖೆ ಕಚೇರಿ ಬಳಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆಯನ್ನೂ ನಡೆಸಿತ್ತು. ಹೀಗಿದ್ದರೂ ಹುಲಿ ದಾಳಿ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Share This Article