ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇಂದು ಮೈಸೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಭಾಗವತ್ ಅವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಅವರ ಜೊತೆಗೆ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೇಂಢೆ, ಕ್ಷೇತ್ರೀಯ ಪ್ರಚಾರಕ್ ಭರತ್ ಕುಮಾರ್ ಸೇರಿದಂತೆ ಸಂಘದ ಹಿರಿಯ ನಾಯಕರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಇತ್ತೀಚೆಗಷ್ಟೇ ಅಕ್ಟೋಬರ್ 2, 2025 ರಂದು 100 ವರ್ಷಗಳನ್ನು ಪೂರೈಸಿದೆ. ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ದೇಶಾದ್ಯಂತ ವಿಜಯದಶಮಿ ಉತ್ಸವಗಳು, ಯುವ ಸಮಾವೇಶಗಳು, ಹಿಂದೂ ಸಮ್ಮೇಳನಗಳು, ಮನೆ–ಮನೆ ಸಂಪರ್ಕ ಹಾಗೂ ಸಾಮಾಜಿಕ ಸದ್ಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನವೆಂಬರ್ 8 ಮತ್ತು 9ರಂದು ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಎಂಬ ಶೀರ್ಷಿಕೆಯಲ್ಲಿ ಉಪನ್ಯಾಸಮಾಲೆ ನಡೆಯಲಿದೆ. ಡಾ. ಮೋಹನ್ ಭಾಗವತ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ನಡೆದ ಮೊದಲ ಉಪನ್ಯಾಸಮಾಲೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಬೆಂಗಳೂರಿನ ಕಾರ್ಯಕ್ರಮಕ್ಕೂ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಸಂಘದ ಶತಮಾನೋತ್ಸವದ ಅಂಗವಾಗಿ ಮುಂಬೈ ಮತ್ತು ಕೊಲ್ಕತ್ತಾದಲ್ಲಿಯೂ ಇದೇ ಶೀರ್ಷಿಕೆಯಡಿ ಉಪನ್ಯಾಸಗಳು ನಡೆಯಲಿವೆ.
