ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ತಾತ್ಕಾಲಿಕ ಜಯ ಸಿಕ್ಕಂತಾಗಿದ್ದರೂ, ಅವರ ಸಮಸ್ಯೆಗಳಿಗೆ ಇನ್ನೂ ತಾರ್ಕಿಕ ಅಂತ್ಯ ದೊರೆತಿಲ್ಲ. ಹತ್ತು ವರ್ಷಗಳ ಬಳಿಕವೂ ರೈತರು ಮತ್ತೆ ಬೀದಿಗಿಳಿಯುವ ಪರಿಸ್ಥಿತಿ ತಪ್ಪದು ಎನ್ನುವುದು ಖಚಿತ. ಕಬ್ಬು ಬೆಳೆಗಾರರ ಸಮಸ್ಯೆಗಳು ಅಸಾಧ್ಯವಾದವುಗಳಲ್ಲ. ಅವು ಕ್ಷಣಾರ್ಧದಲ್ಲೇ ಬಗೆಹರಿಯಬಹುದಾದವು. ಆದರೆ ಇಂದಿನ ಸ್ಥಿತಿಯಲ್ಲಿ ಅದು ಸಾಧ್ಯವಾಗದ ಮಾತಾಗಿದೆ. ಏಕೆಂದರೆ ಎಲ್ಲ ಸಕ್ಕರೆ ಕಾರ್ಖಾನೆಗಳೂ ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಸಿಲುಕಿವೆ. ರೈತರಿಗೆ ಎಫ್ಆರ್ಪಿ ದರ ನೀಡಿದರೂ, ನಿಜವಾದ ಲಾಭ ಕಾರ್ಖಾನೆ ಮಾಲೀಕರಿಗೇ ಸೇರುತ್ತದೆ. ಈ ಅನ್ಯಾಯಕ್ಕೆ ತಾರ್ಕಿಕ ಅಂತ್ಯವೇ ಇಲ್ಲವೆ? ಇದೆ. ಅದು ತುಂಬಾ ಕಷ್ಟವಾದುದೂ ಅಲ್ಲ. ರಂಗರಾಜನ್ ಸಮಿತಿಯ ಶಿಫಾರಸುಗಳನ್ನು ಷರತ್ತುಬದ್ಧವಾಗಿ, ಕಾನೂನುಬದ್ಧವಾಗಿ ಜಾರಿಗೆ ತಂದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು.
ರಂಗರಾಜನ್ ಸಮಿತಿ ಏನು ಹೇಳುತ್ತದೆ?
ರಂಗರಾಜನ್ ಸಮಿತಿ 2021ರಲ್ಲಿ ರಚಿಸಲ್ಪಟ್ಟಿದ್ದರೂ, ಅದರ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಸಮಿತಿಯ ಶಿಫಾರಸು ಪ್ರಕಾರ, ಲಾಭವಾಗಲಿ ಅಥವಾ ನಷ್ಟವಾಗಲಿ, ಎರಡರಲ್ಲಿಯೂ ರೈತ ಮತ್ತು ಕಾರ್ಖಾನೆ ಮಾಲೀಕರು ಸಮಾನ ಹಂಚಿಕೆದಾರರಾಗಬೇಕು. ಅಂದರೆ, ಕಬ್ಬಿನಿಂದ ಸಿಗುವ ಉಪಉತ್ಪನ್ನಗಳಾದ ಎಥಾನಾಲ್, ಆಲ್ಕೋಹಾಲ್ ಮತ್ತು ಇತರ ವಸ್ತುಗಳ ಲಾಭದಲ್ಲಿಯೂ ರೈತನಿಗೂ ಪಾಲಿರಬೇಕು. ಎಫ್ಆರ್ಪಿ ಅಥವಾ ಎಸ್ಎಪಿ ಎಂಬ ದರ ವ್ಯವಸ್ಥೆಗಳಿಗಿಂತ, ಸಮಿತಿಯು ಒಟ್ಟು ಆದಾಯದ ಶೇ.70 ರೈತನ ಪಾಲಾಗಬೇಕು ಎಂದು ಶಿಫಾರಸು ಮಾಡಿದೆ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಆದರೆ ಈ ಶಿಫಾರಸು ಜಾರಿಯಾದರೆ, ರಾಜಕಾರಣಿಗಳ ಕೈಸೇರಿರುವ ಕಾರ್ಖಾನೆಗಳ ಲಾಭ ಕಡಿಮೆಯಾಗುತ್ತದೆ. ಹೀಗಾಗಿ, ಸರ್ಕಾರ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದೆ ಎನ್ನುವುದು ನಾಗರಿಕರ ಅಭಿಪ್ರಾಯ.
ಉಪಉತ್ಪನ್ನಗಳ ಲಾಭವೆಷ್ಟು?
ದತ್ತಾಂಶಗಳ ಪ್ರಕಾರ, ಪ್ರತಿ ಕ್ವಿಂಟಲ್ ಕಬ್ಬಿನಿಂದ ಸರಾಸರಿ 700-800 ಆದಾಯ ದೊರೆಯುತ್ತದೆ. ಸರ್ಕಾರ ನೀಡುವ ಈಖP ಸುಮಾರು ೩೩೦ ಇದ್ದರೂ, ಉಳಿದ ಅರ್ಧದಷ್ಟು ಲಾಭ ಎಥಾನಾಲ್, ಮೊಲ್ಯಾಸಿಸ್, ಬ್ಯಾಗಾಸ್ ಮುಂತಾದ ಉಪಉತ್ಪನ್ನಗಳಿಂದ ಬರುತ್ತದೆ. ಈ ಲಾಭದಲ್ಲೂ ರೈತನಿಗೂ ಪಾಲಿರಬೇಕು ಎಂದು ಸಮಿತಿ ಹೇಳುತ್ತದೆ. ಆದರೆ ಪ್ರಸ್ತುತ ನಡೆಯುತ್ತಿರುವ ಕ್ರಮದಲ್ಲಿ, ಈ ಲಾಭದ ಭಾಗ ರೈತನಿಗೆ ತಲುಪುವುದಿಲ್ಲ. ಕಾರ್ಖಾನೆ ಮಾಲೀಕರಿಗೆ ಮಾತ್ರ ಲಾಭ! ಇದೇ ರೈತ, ಕಾರ್ಖಾನೆ ಮಾಲೀಕರು, ಮತ್ತು ಸರ್ಕಾರದ ಮಧ್ಯೆ ನಡೆಯುತ್ತಿರುವ ರಾಜಕೀಯ ಚದುರಂಗದಾಟ.
ಅನುಷ್ಠಾನಕ್ಕೆ ತಡೆ ಯಾಕೆ?
ಚುನಾವಣೆಗೂ ಮುನ್ನ ಹಸಿರು ಶಾಲು ಹಾಕಿ ರೈತ ಪರವಾಗಿ ಮಾತನಾಡುವ ನೇತಾರರೇ ಈ ಪ್ರಶ್ನೆಗೆ ಉತ್ತರ ಕೊಡಬೇಕು. ಅವರಲ್ಲೇ ಬಹುತೆಕ ಕಾರ್ಖಾನೆ ಮಾಲೀಕರು ಅಥವಾ ಪಾಲುದಾರರು ಇದ್ದಾರೆ. ಹೀಗಾಗಿ, ಅವರು ರಂಗರಾಜನ್ ಶಿಫಾರಸುಗಳನ್ನು ಜಾರಿಗೆ ತಡೆಯೊಡ್ಡುವುದು ಮೇಲ್ಮಟ್ಟಕ್ಕೆ ನಿಜ ಏನಾದರೂ ಅದೇ ಅಂತಿಮ ಸತ್ಯ. ಇಂದಿನ ಪರಿಸ್ಥಿತಿಯಲ್ಲಿ, ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿವೆ. ಕಬ್ಬಿನ ಉತ್ಪಾದನೆಯಿಂದ ಬರುವ ಒಟ್ಟು ಆದಾಯದ ಶೇ.೫೦–೭೦ ಭಾಗ ಅವರಿಗೆ ಸೇರುತ್ತದೆ. ಆದರೆ ರೈತರಿಗೆ ನ್ಯಾಯಸಮ್ಮತ ಹಂಚಿಕೆ ದೊರೆತರೆ, ಅವರ ಬದುಕು ಹಸನಾಗುತ್ತದೆ. ಇಂದಿನ ಸ್ಥಿತಿಯಲ್ಲಿ ಅನ್ನದಾತ ತನ್ನ ಬೆವರಿನ ಬೆಳೆಗಾಗಿ ಬೀದಿಗಿಳಿಯಬೇಕಾದ ಅನಾಥ ಪರಿಸ್ಥಿತಿಯಲ್ಲಿದ್ದಾನೆ.
ಎಲ್ಲಿದೇ ಪಾರದರ್ಶಕತೆ?
frp ದರ ನಿಗದಿಯಾಗುತ್ತದೆ, ಆದರೆ ಅದರ ಲೆಕ್ಕಾಚಾರ ಪಾರದರ್ಶಕವಾಗಿದೆಯೇ? ಇಲ್ಲ. ಕಾರ್ಖಾನೆಗಳು ಯಾವುದೇ ಲಾಭ–ನಷ್ಟದ ವಿವರವನ್ನು ರೈತರಿಗೆ ಬಹಿರಂಗಪಡಿಸುತ್ತಿಲ್ಲ. ರಂಗರಾಜನ್ ಸಮಿತಿಯ ಪ್ರಕಾರ, ಕಬ್ಬನ್ನು ನೀಡಿದ ರೈತನಿಗೆ 30 ದಿನಗಳೊಳಗೆ ಪಾವತಿ ಮಾಡಬೇಕು. ಪಾವತಿ ವಿಳಂಬವಾದರೆ ದಂಡ ಸಹಿತ ಪಾವತಿಸಬೇಕು. ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ರೈತರಿಗೆ ಎಲ್ಲ ವಿವರಗಳು ಲಭ್ಯವಾಗಬೇಕು. ಇವು ಜಾರಿಯಾದರೆ ಪಾರದರ್ಶಕತೆ ಬರಬಹುದು. ಆದರೆ ಅದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಬೇಕು.
ಮತ್ತೊಮ್ಮೆ ಬೀದಿಗಿಳಿಯುವ ಮುನ್ನ ಎಚ್ಚರಗೊಳ್ಳಬೇಕು!
ಕಬ್ಬು ಬೆಳೆಗಾರರ ಸಮಸ್ಯೆಯೇ ಇಷ್ಟು ವಿಶಾಲವಾದ್ದು ಎಂದರೇ, ಇದರ ಕುರಿತು ಪಿ.ಎಚ್.ಡಿ. ಪ್ರಬಂಧವನ್ನೇ ರಚಿಸಬಹುದು. ರಂಗರಾಜನ್ ಸಮಿತಿಯ ವಿಚಾರಗಳು ಈಗಾಗಲೇ ರೈತ ಮುಖಂಡರ ಬಾಯಲ್ಲಿ ಪುನಃ ಪ್ರಸ್ತುತವಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ಸಮಿತಿ ಅನುಷ್ಠಾನದ ಹೋರಾಟ ಮತ್ತೊಮ್ಮೆ ಪ್ರಬಲವಾಗುವುದು ಖಚಿತ. ಸಮಿತಿಯ ಶಿಫಾರಸುಗಳಲ್ಲಿ ನ್ಯಾಯ, ನೈತಿಕತೆ ಮತ್ತು ಹಂಚಿಕೆದಾರಿತನದ ತತ್ವ ಇದೆ. ರೈತ ಮತ್ತು ಕಾರ್ಖಾನೆ ಎರಡೂ ಹೊಣೆಗಾರಿಕೆಯಿಂದ ಲಾಭ–ನಷ್ಟವನ್ನು ಹಂಚಿಕೊAಡರೆ, ಕಬ್ಬು ಬೆಳೆಯ ನಿಜವಾದ ಶಾಶ್ವತ ಪರಿಹಾರ ಸಾಧ್ಯ. ಆದ್ದರಿಂದ ರಂಗರಾಜನ್ ಸಮಿತಿ ಅನುಷ್ಠಾನ ಅಗತ್ಯ, ತುರ್ತು ಮತ್ತು ನ್ಯಾಯಸಮ್ಮತ. ಮುಗಿಸುವ ಮುನ್ನ ಬೆಳೆಯ ಬೆವರು, ಲಾಭದ ಹಂಚಿಕೆ, ಮತ್ತು ಪಾರದರ್ಶಕತೆ, ಈ ಮೂರು ಒಂದಾದಾಗ ಮಾತ್ರ ರೈತನ ಬದುಕು ಹಸನಾಗುತ್ತದೆ.
ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಮಣಿಯುತ್ತಿದ್ಯಾ ಸರ್ಕಾರ? ರಂಗರಾಜನ್ ಸಮಿತಿಯ ವರದಿ ಅನುಷ್ಠಾನಕ್ಕೆ ಹಿಂದೇಟು ಯಾಕೆ?
