Ad image

ಬೇರೆ ರಾಜ್ಯದ ಕಾರು ಖರೀದಿ ವೇಳೆ ಹುಷಾರ್ – ದೆಹಲಿ ಸ್ಫೋಟದ ಬೆನ್ನಲ್ಲೇ ಎಚ್ಚೆತ್ತ ಆರ್‌ಟಿಓ

Team SanjeMugilu
2 Min Read

ಬೆಂಗಳೂರು: ದೆಹಲಿ ಸ್ಫೋಟ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಡೀ ಪ್ರಕರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಬೇರೆ ರಾಜ್ಯದಿಂದ ಬಂದಿದ್ದ ಕಾರು, ಜೊತೆಗೆ ಕಾರಿನ ಮಾಲೀಕ. ಯಾರದ್ದೋ ಹೆಸರಿನ ಕಾರಿನಲ್ಲಿ ಯಾರೋ ಮಾಡಿದ್ದ ಕ್ರೈಂ, ಬೇರೆ ಯಾರದ್ದೋ ತಲೆಗೆ ಬಂದಿದೆ. ಈ ಬೆನ್ನಲ್ಲೇ ಇನ್ಮುಂದೆ ಅನ್ಯರಾಜ್ಯ ಕಾರುಗಳನ್ನ ಖರೀದಿ ಮಾಡುವಾಗ ಅಥವಾ ಮಾರುವಾಗ ಎಚ್ಚರವಹಿಸುವಂತೆ ಸಾರಿಗೆ ಇಲಾಖೆ ಸಲಹೆ ನೀಡಿದೆ.

ಕಳೆದ ಮೂರು ದಿನದ ಹಿಂದೆ ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ಇಡೀ ದೇಶವನ್ನ ಬೆಚ್ಚಿಬೀಳಿಸಿದೆ. ಹರಿಯಾಣ ನೋಂದಣಿಯ ಕಾರಿನಿಂದ ದೆಹಲಿಯಲ್ಲಿ ಸೃಷ್ಟಿಸಿದ ಕೃತ್ಯ, ಹತ್ತಾರು ಜೀವಗಳನ್ನ ಬಲಿ ಪಡೆದಿದೆ. ಅನ್ಯ ರಾಜ್ಯದಿಂದ ಬಂದಿದ್ದ ಕಾರು ಮಾಡಿದ್ದ ದುರಂತ ಈಗ ಹಲವರ ಬುಡಕ್ಕೆ ಬಂದಿದೆ.

ಹೌದು, ದೆಹಲಿ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಐ20 ಕಾರು ಮೂಲತಃ ಹರಿಯಾಣದ್ದು. ಗುರುಗ್ರಾಮದ ಶಾಂತಿ ನಗರದ ಮೊಹಮ್ಮದ್ ಸಲ್ಮಾನ್ ಎಂಬುವರದ್ದು. ಮಾರ್ಚ್ನಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‌ಗೆ ಈ ಕಾರನ್ನ ಮಾರಾಟ ಮಾಡಲಾಗಿತ್ತು. ಬಳಿಕ ಇಬ್ಬರು, ಮೂರು ಜನಕ್ಕೆ ಈ ಕಾರು ಮಾರಾಟ ಆಗಿ ಕೊನೆಯದಾಗಿ ಸೋನು ಎಂಬಾತನಿಂದ ಸ್ಪೋಟದಲ್ಲಿ ಭಾಗಿಯಾದ ಉಮರ್ ಕೈಗೆ ಸೇರಿದೆ. ಆದರೆ ಮಾರಾಟದ ವೇಳೆ ದಾಖಲೆ ಸರಿ ಇಲ್ಲದ ಕಾರಣ ಉಮರ್‌ಗೆ ಕಾರು ಮಾರಿದ ಸೋನು ಕೂಡ ಈಗ ಕೃತ್ಯದ ಸಂಬಂಧ ತಪ್ಪಿತಸ್ಥನಾಗಿದ್ದು, ತನಿಖೆ ಎದುರಿಸುವಂತಾಗಿದೆ. ಇದೇ ಕಾರಣಗಳಿಗೆ ಸದ್ಯ ಅನ್ಯ ರಾಜ್ಯಗಳಿಂದ ಕಡಿಮೆ ದರಕ್ಕೆ ಕಾರುಗಳನ್ನ ಖರೀದಿ ಮಾಡೋ ಮುನ್ನ ಎಚ್ಚರ ವಹಿಸುವಂತೆ ರಾಜ್ಯ ಸಾರಿಗೆ ಇಲಾಖೆ ಸೂಚಿಸಿದೆ.

ಇನ್ನೂ ಅನ್ಯ ರಾಜ್ಯ ಕಾರು ಖರೀದಿ ವೇಳೆ ಮೊದಲು ಕಾರಿನ ಪೂರ್ವ ಪರ ತಿಳಿಯುವುದು ಸೂಕ್ತ. ಸಾಧ್ಯವಿದ್ದಲ್ಲಿ ನೋಂದಣಿ ಆರ್‌ಟಿಓಗಳಲ್ಲಿ ಅಥವಾ ವಾಹನ ವೆಬ್‌ಸೈಟ್ ಮೂಲಕ ಕಾರಿನ ದಾಖಲೆ ಪರಿಶೀಲನೆ ಮಾಡಬೇಕು ಅಥವಾ ನೀವು ಕಾರುಗಳನ್ನ ಬೇರೆ ಯಾರಿಗೋ ಮಾರಾಟ ಮಾಡುವವರಾಗಿದ್ದರು ಎಚ್ಚರ ವಹಿಸೋದು ಸೂಕ್ತ. 29/30 ಫಾರ್ಮ್ನಲ್ಲಿ ನೀವು ಸಹಿ ಮಾಡಿದ ಬಳಿಕ ಕಾರು ಪಡೆದ ವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ತನ್ನ ಹೆಸರಿಗೆ ಕಾರಿನ ಮಾಲೀಕತ್ವ ಬದಲಾಯಿಸಿಕೊಳ್ಳದೇ, ಯಾವುದಾದರೂ ತಪ್ಪು ಮಾಡಿದರೆ ಅದು ನೇರ ಮೂಲ ದಾಖಲೆ ಹೊಂದಿದ ವ್ಯಕ್ತಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಮಾರಾಟ ಮತ್ತು ಕೊಳ್ಳುವಾಗ ದಾಖಲೆ ಪರಿಶೀಲನೆ ಮತ್ತು ವರ್ಗಾವಣೆ ಬಗ್ಗೆ ಕಡ್ಡಾಯ ಗಮನಹರಿಸುವಂತೆ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Share This Article