ನವದೆಹಲಿ: ಬಾಂಬರ್ ಉಮರ್ ನಬಿ ಕೆಂಪುಕೋಟೆಯ ಬಳಿ ಕಾರು ಬಾಂಬ್ ಸ್ಫೋಟಿಸುವ ಮೊದಲು ದೆಹಲಿಯಲ್ಲಿರುವ ತಬ್ಲಿಘಿ ಜಮಾತ್ ಸಂಘಟನೆ ನಡೆಸುವ ಮಸೀದಿಗೆ ಭೇಟಿ ನೀಡಿದ್ದ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಡಾ. ಉಮರ್ ಕಾರು ಬಾಂಬ್ ಸ್ಫೋಟ ನಡೆದ ನವೆಂಬರ್ 10 ರಂದು ಮಧ್ಯಾಹ್ನ 2:30ರ ಸುಮಾರಿಗೆ ಫೈಜ್ ಇಲಾಹಿ ಮಸೀದಿಗೆ ಭೇಟಿ ನೀಡಿ ಅಲ್ಲಿ ಸುಮಾರು 10-15 ನಿಮಿಷಗಳ ಕಾಲ ಕಳೆದಿದ್ದ. ನಂತರ ಸುನೇಹ್ರಿ ಮಸೀದಿ ಬಳಿಯ ಕೆಂಪು ಕೋಟೆ ಪಾರ್ಕಿಂಗ್‌ಗೆ ತೆರಳಿ ಕಾರು ಪಾರ್ಕ್ ಮಾಡಿದ್ದ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಉಮರ್ ಮಸೀದಿಯೊಳಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ದೃಶ್ಯಗಳು ಸೆರೆಯಾಗಿವೆ. ಫೈಜ್ ಇಲಾಹಿ ಮಸೀದಿ ರಾಮ್‌ಲೀಲಾ ಮೈದಾನದ ಮೂಲೆಯಲ್ಲಿ ತುರ್ಕಮನ್ ಗೇಟ್ ಎದುರು ಇದೆ. ತಬ್ಲಿಘಿ ಜಮಾತ್ ಸಂಘಟನೆ ಫೈಜ್ ಇಲಾಹಿ ಮಸೀದಿಯನ್ನು ನಿರ್ವಹಣೆ ಮಾಡುತ್ತದೆ.
ಬ್ರಿಟಿಷರ ಅವಧಿಯಲ್ಲಿ 1926 ರಲ್ಲಿ ಭಾರತದಲ್ಲಿ ಹುಟ್ಟಿಕೊಂಡ ತಬ್ಲಿಘಿ ಜಮಾತ್ ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುತ್ತದೆ. ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.
ಕೋವಿಡ್ ಮೊದಲ ಅಲೆಯ ಸಮಯದಲ್ಲಿ ಭಾರತದಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸಾಮೂಹಿಕ ಸಭೆಯ ಆಯೋಜಿಸಿದ್ದಕ್ಕೆ ಈ ಸಂಘಟನೆಯ ವಿರುದ್ಧ ಮೊದಲ ಬಾರಿಗೆ ದೇಶದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು.
ಸೌದಿಯಿಂದ ನಿಷೇಧ:
ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ 2021 ರಲ್ಲಿ ನಿಷೇಧಿಸಿತ್ತು ಈ ಸಂಘಟನೆ ಭಯೋತ್ಪಾದನೆ ಚಟುವಟಿಕೆಗಳಿಗೆ ಹೆಬ್ಬಾಗಿಲು ಎಂದಿರುವ ಸರ್ಕಾರ ಈ ಸಂಘಟನೆಯಿಂದ ದೂರ ಇರುವಂತೆ ಪ್ರಜೆಗಳಿಗೆ ಎಚ್ಚರಿಕೆ ನೀಡಿತ್ತು. ಮುಸ್ಲಿಮ್ ಸಮಾಜಕ್ಕೆ ಈ ಸಂಘಟನೆ ತಪ್ಪು ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿತ್ತು.
