ಬೆಂಗಳೂರು: ಈಗಾಗಲೇ ಕಸ ಹಾಕೋರ ವಿರುದ್ಧ ಜಿಬಿಎ ಸಮರ ಸಾರಿದ್ದು, ಆಪರೇಷನ್ ಕಸ ಕಾರ್ಯಾಚರಣೆ ಮಾಡುತ್ತಿದೆ. ಇದರ ನಡುವೆ ಬೆಂಗಳೂರಲ್ಲಿ ನೀರು ಪೋಲು ಮಾಡುವವರ ಮೇಲೆ ಬಿಡಬ್ಲೂಎಸ್‌ಎಸ್‌ಬಿ ಹದ್ದಿನ ಕಣ್ಣಿಟ್ಟಿದ್ದು, ಭರ್ಜರಿ ದಂಡ ವಸೂಲಿ ಮಾಡಿದೆ. ಇನ್ಮುಂದೆ ಈ ದಂಡದ ಪ್ರಮಾಣ ಮತ್ತಷ್ಟು ಹೆಚ್ಚಾಗೋ ಸಾಧ್ಯತೆಯಿದೆ.
ರಸ್ತೆಯಲ್ಲಿ ಕಸ ಸುರಿಯುವವರ ಮನೆ ಮುಂದೆ ಕಸ ಸುರಿದು ಬೆಂಗಳೂರಿಗರಿಗೆ ಪಾಠವನ್ನು ಜಿಬಿಎ ಕಲಿಸಿತ್ತು. ಇದರ ನಂತರ ಇದೀಗ ನೀರು ಪೋಲು ಮಾಡುವವರಿಗೆ ಪಾಠ ಕಲಿಸಲು ಬೆಂಗಳೂರು ಜಲಮಂಡಳಿ ಮುಂದಾಗಿದೆ. ಬೆಂಗಳೂರಲ್ಲಿ ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದವರಿಗೆ ಮತ್ತು ಪೋಲು ಮಾಡಿದವರಿಗೆ ಜಲಮಂಡಳಿ 5,000 ರೂ. ದಂಡವನ್ನು ಕೆಲ ತಿಂಗಳಿನಿಂದ ಹಾಕುತ್ತಿದೆ. ಇದುವರೆಗೂ ನಗರದಲ್ಲಿ ಅಂದಾಜು 40 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಪ್ರಮುಖವಾಗಿ ಬೋರ್‌ವೆಲ್ ನೀರನ್ನು ವಾಹನ ತೊಳೆಯಲು, ರಸ್ತೆಗೆ ಸುರಿದವರು, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ದಂಡ ವಿಧಿಸಲಾಗಿದೆ. ಆದರೂ ನೀರು ಪೋಲಾಗುವುದು ನಿಲ್ಲುತ್ತಿಲ್ಲ. ಹೀಗಾಗಿ ಮತ್ತಷ್ಟು ಕಾರ್ಯಾಚರಣೆ ಹೆಚ್ಚಿಸಲು ನಿರ್ಧರಿಸಿದೆ. ಇನ್ಮುಂದೇ ನೀರು ಪೋಲು ಮಾಡಿದ ಮಾಹಿತಿ ಬಂದ ಕಡೆ ವಾರಕ್ಕೊಮ್ಮೆ ಸರ್‌ಪ್ರೈಸ್ ವಿಸಿಟ್ ಮಾಡುವ ಪ್ಲಾನ್ ಮಾಡಿದೆ.
ಇನ್ನೂ ಕುಡಿಯುವ ನೀರು ಪೋಲು ಮಾಡುವವರಿಗೆ 5 ಸಾವಿರ ರೂ. ದಂಡ ಹಾಕಲಾಗುತ್ತಿದೆ. ದಂಡ ಕಟ್ಟದೇ ಇದ್ದರೆ ನೀರಿನ ಬಿಲ್ ಜೊತೆ ಫೈನ್ ಮೊತ್ತವನ್ನು ಸೇರಿಸಿ ಹಾಕಲಾಗುತ್ತದೆ. ಜೊತೆಗೆ ನೀರಿನ ಕನೆಕ್ಷನ್ ಕಟ್ ಮಾಡೋ ಎಚ್ಚರಿಕೆಯನ್ನು ಬಿಡಬ್ಲ್ಯೂಎಸ್‌ಎಸ್‌ಬಿ ನೀಡಿದೆ.
