Ad image

ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ – ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವು

Team SanjeMugilu
1 Min Read

ಶ್ರೀನಗರ: ದೆಹಲಿ ಕೆಂಪುಕೋಟೆ  ಬಳಿ ಕಾರು ಸ್ಫೋಟ ಪ್ರಕರಣ ಮಾಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಶ್ರೀನಗರದ ನೌಗಮ್‌ ಪೊಲೀಸ್‌ ಠಾಣೆಯಲ್ಲಿ ಉಂಟಾದ ಭಾರೀ ಸ್ಫೋಟದಲ್ಲಿ ಇಬ್ಬರು ಅಧಿಕಾರಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭೀಕರ ಸ್ಫೋಟ ಶಬ್ಧಕ್ಕೆ ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಯ ಕಿಟಕಿ ಗಾಜುಗಳು ಹಾನಿಗೊಳಗಾದವು. ಜೊತೆಗೆ ಮಾನವ ದೇಹದ ಅವಶೇಷಗಳು ಸುಮಾರು 300 ಅಡಿ ದೂರದ ವರೆಗೆ ಚದುರಿತ್ತು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

ಶುಕ್ರವಾರ ತಡರಾತ್ರಿ 11:22ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಈವರೆಗೆ 9 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿತ್ತು. ಹೀಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುವುದೂ ಒಂದು ಗಂಟೆ ತಡವಾಗಿತ್ತು ಎನ್ನಲಾಗಿದೆ.

2 ಆಯಾಮಗಳಲ್ಲಿ ತನಿಖೆ
ಸದ್ಯ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸ್‌ ಇಲಾಖೆಯು ಐಇಡಿ ಪಿತೂರಿ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ 2 ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿವೆ.

ನಿರ್ಲಕ್ಷ್ಯ ಏಕೆ?
ಪೊಲೀಸ್‌ ಠಾಣೆಯಲ್ಲೇ ಸಂಗ್ರಹಿಸಲಾಗಿದ್ದ ಸುಮಾರು 360 ಕಿಗ್ರಾಂ ನಷ್ಟು ಅಮೋನಿಯಂ ನೈಟ್ರೇಟ್‌ ಸ್ಫೋಟಕ ವಸ್ತುಗಳನ್ನ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಸೀಲ್‌ ಮಾಡುವಾಗ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಭಯೋತ್ಪಾದಕ ಶಂಕೆ ಏಕೆ?
2ನೇಯದಾಗಿ ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದೆ. ಪೊಲೀಸ್‌ ಠಾಣೆ ಆವರಣದಲ್ಲಿ ಜಪ್ತಿ ಮಾಡಿ ನಿಲ್ಲಿಸಿದ್ದ ಕಾರಿನಲ್ಲಿ ಐಇಡಿ ಇರಿಸಲಾಗಿತ್ತು. ಇದರಲ್ಲಿ ಅಮೋನಿಯಂ ನೈಟ್ರೇಟ್‌ ಇದ್ದ ಕಾರಣ ಸ್ಫೋಟದ ಪ್ರಮಾಣ ದೊಡ್ಡಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೇ ಜೈಶ್‌ ಎ ಮೊಹಮ್ಮದ್‌ನ ಮುಖವಾಣಿ ಪಿಎಎಫ್‌ಎಫ್ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.

Share This Article