Ad image

ಕುಡಿಯಬೇಡ ಅಂದಿದ್ದೇ ತಪ್ಪಾಯ್ತು: ಹೆಂಡತಿ ಜೀವವನ್ನೇ ಬಲಿ ಪಡೆದ ಪಾಪಿ ಪತಿ

Team SanjeMugilu
1 Min Read

ಚಿಕ್ಕಬಳ್ಳಾಪುರ/ಬೆಂಗಳೂರು: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಬಿಗಿದು ಪಾಪಿ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ. ಪಾವನಿ(30) ಮೃತ ದುರ್ದೈವಿಯಾಗಿದ್ದು, ಕೊಲೆ ಮಾಡಿದ ಪತಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ವರ್ಷಗಳ ಹಿಂದೆ ಪಾವನಿ ಹಾಗೂ ರಾಘವೇಂದ್ರ ಮದುವೆಯಾಗಿದ್ದರು. ಮೊನ್ನೆ ರಾಘವೇಂದ್ರ ಊರಿಗೆ ಬಂದಿದ್ರೂ ಮನೆಗೆ ಬಂದಿರಲಿಲ್ಲ. ಊರಿಗೆ ಬಂದ್ರೂ ಯಾಕೆ ಮನೆಗೆ ಬಂದಿಲ್ಲ ಎಂದು ಪಾವನಿ ಪ್ರಶ್ನಿಸಿದ್ದು, ಕುಡ್ಕೊಂಡು ಎಲ್ಲೋ ಬಿದ್ದಿರ್ತಿಯಾ ಮನೆಗೆ ಬರಲು ಆಗಲ್ವಾ ಎಂದಿದ್ದಾಳೆ. ಈ ವೇಳೆ ಕೆರಳಿದ್ದ ರಾಘವೇಂದ್ರ ಪತ್ನಿ ಜೊತೆ ಗಲಾಟೆ ಶುರುಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿದ್ದು, ಕುತ್ತಿಗೆಗೆ ವೇಲ್ ಬಿಗಿದು ಪತ್ನಿ ಪಾವನಿಯ ಕೊಲೆ ಮಾಡಿದ್ದಾನೆ. ಅತ್ತ ತಾಯಿ ಮೃತಪಟ್ಟಿದ್ದರೆ ಇತ್ತ ತಂದೆ ಜೈಲು ಸೇರಿರುವ ಕಾರಣ 4 ವರ್ಷದ ಗಂಡು ಮಗು ಅನಾಥವಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ 28 ವರ್ಷದ ಗೃಹಿಣಿಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಎಡ್ವಿನ್ ಎಂದು ಗುರುತಿಸಲಾಗಿದ್ದು, ಪತಿಯೇ ಪತ್ನಿಯನ್ನ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಕಳೆದ ಏಳು ವರ್ಷಗಳ ಹಿಂದೆ ಮಗಳ ಮದುವೆ ಆಗಿದ್ದು, ಹಣದ ವಿಚಾರಕ್ಕೆ ಜಗಳವಾಗಿ ಆಕೆಯ ಪತಿಯೇ ಎಡ್ವಿನ್​​ ಅವರನ್ನು ಕೊಂದಿರೋದಾಗಿ ಪೋಷಕರು ಆರೋಪಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಎಡ್ವಿನ್ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಕೈ ಬಳೆಗಳು ಸಂಪೂರ್ಣ ಪುಡಿ ಪುಡಿಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ರಾಜಗೋಪಾಲ ನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

Share This Article